ಯಲಹಂಕದಲ್ಲಿ ವಿಶ್ವನಾಥ್ ದಂಪತಿ ಬಿರುಸಿನ ಪ್ರಚಾರ

ಬೆಂಗಳೂರು,ಮೇ೮: ಬಹಿರಂಗ ಪ್ರಚಾರದ ಕಡೆಯ ದಿನವಾದ ಇಂದು ಯಲಹಂಕ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಮತ್ತು ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಮತ ಪ್ರಚಾರ ನಡೆಸಿದರು.
ಯಲಹಂಕದ ನ್ಯಾಯಾಂಗ ಬಡಾವಣೆ, ಸಿಂಗನಾಯಕನಹಳ್ಳಿ, ಅಟ್ಟೂರು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವವಾದ ಬೆಂಬಲ ದೊರೆಯುತ್ತಿದೆ. ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಮತಯಾಚನೆ ಮಾಡುತ್ತಿದ್ದು , ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಲಿರುವುದಾಗಿ ವಿಶ್ವನಾಥ್ ತಿಳಿಸಿದರು.
ಈ ಬಾರಿ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಂಕಲ್ಪ ಮಾಡಿದ್ದು ಪ್ರತಿ ಬೂತ್ ಮಟ್ಟದಲ್ಲೂ ನಮ್ಮ ಕಾರ್ಯಕರ್ತರು ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮತ್ತೊಂದೆಡೆ ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ನೂರಾರು ಮಹಿಳೆಯರೊಂದಿಗೆ ಸಿಂಗನಾಯಕನಹಳ್ಳಿ, ಯಡಿಯೂರಪ್ಪನಗರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಪತಿ ಪರ ಮತಯಾಚನೆ ಮಾಡಿದರು.
ಶಾಸಕರಾಗಿ ಎಸ್.ಆರ್. ವಿಶ್ವನಾಥ್ ಅವರು ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವ ಕೆಲಸಗಳು ಹಾಗೂ ವಿಶ್ವವಾಣಿ ಫೌಂಡೇಶನ್ ವತಿಯಿಂದ ಪ್ರತಿ ಗ್ರಾಮದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಜಾರಿಗೊಳಿಸಲಾಗಿರುವ ಯೋಜನೆಗಳೂ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಮತಯಾಚನೆ ಮಾಡಿದರು.

ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಅವರು ಇಂದು ಕ್ಷೇತ್ರದ ವಿವಿಧೆಡೆ ಪತಿ ವಿಶ್ವನಾಥ್ ಪರ ಮತಯಾಚನೆ ಮಾಡಿದರು.