ಯಲಗೂರ,ಬಳಬಟ್ಟಿ ಪಂಚಾಯ್ತಿಗೆ ಬಿರುಸಿನ ಶಾಂತಿಯುತ ಮತದಾನ

ಆಲಮಟ್ಟಿ :ಜು.24: ಇಲ್ಲಿಗೆ ಸಮೀಪದ ಯಲಗೂರು ಪಂಚಾಯ್ತಿಯ 14 ಹಾಗೂ ಬಳಬಟ್ಟಿ ಪಂಚಾಯ್ತಿಯ 10 ಜನ ಸದಸ್ಯರ ಆಯ್ಕೆಗೆ ಭಾನುವಾರ ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆಯಿಂದಲೇ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಚಲಾಯಿಸಿದರು.

ಪ್ರತಿ ಮತಗಟ್ಟೆ ಕೇಂದ್ರದಲ್ಲಿಯೂ ಮತಚಲಾಯಿಸಲು ಉದ್ದನೆಯ ಸರತಿ ಸಾಲು ಹೆಚ್ಚಾಗಿತ್ತು. ಮತದಾನ ಹಕ್ಕು ಚಲಾಯಿಸುವ ಉತ್ಸಾಹದ ಕೌತಕದಲ್ಲಿ ಜನತೆ ನಗೆ ಬೀರಿದರು. ಜರಿಯುತ್ತಿದ್ದ ವರ್ಷಧಾರೆಯಲ್ಲೂ ಮತ ಸಂಭ್ರಮ ಹೇರಳವಾಗಿತ್ತು.

ಪ್ರತಿ ಮತದಾನ ಕೇಂದ್ರಕ್ಕೂ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ, ಬಸವನಬಾಗೇವಾಡಿ ಡಿವೈಎಸ್ ಪಿ ಕರುಣಾಕರಶೆಟ್ಟಿ, ಸಿಪಿಐ ಅಶೋಕ ಚವ್ಹಾಣ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಶಾಂತಿಯುತ ಮತದಾನಕ್ಕಾಗಿ ಕಾಶೀನಕುಂಟಿ ಗ್ರಾಮದಲ್ಲಿ ಒಂದು ಡಿ ಆರ್ ವಾಹನದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಇನ್ನುಳಿದ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿಯೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಎಲ್ಲಾ ಮತಗಟ್ಟೆಯಲ್ಲಿಯೂ ಅಭ್ಯರ್ಥಿಗಳು ಮತದಾರರನ್ನು ಕರೆದುಕೊಂಡು ಬರಲು ಟಂಟಂ, ದ್ವಿಚಕ್ರ ವಾಹನಗಳ ವ್ಯವಸ್ಥೆ ಮಾಡಿದ್ದರು. ಪ್ರತಿ ಮನೆ ಮನೆಗೆ ತೆರಳಿ ಮತದಾರರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬರುತ್ತಿದ್ದ ದೃಶ್ಯ ಕಂಡು ಬಂತು.

ಒಟ್ಟಾರೆ ಸ್ಥಳೀಯ ಆಡಳಿತದ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿತ್ತು. ಯಲಗೂರ ಹಾಗೂ ಬಳಬಟ್ಟಿ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿರುವ ತಲಾ 33 ಅಭ್ಯರ್ಥಿಗಳು ಸೇರಿ ಒಟ್ಟಾರೇ 66 ಜನರ ಚುನಾವಣಾ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗಿವೆ.

ಮತದಾನದ ನಂತರ ನಿಡಗುಂದಿ ಪಟ್ಟಣ ಜಿವಿವಿಎಸ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಮ್ ನಲ್ಲಿ ಮತಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಯಿತು.

ಜು.26 ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಜಿವಿವಿಎಸ್ ಕಾಲೇಜು ಮೈದಾನದಲ್ಲಿ ಮತ ಎಣಿಕೆ ನಡೆಯಲಿದೆ.

ಶೇ 76 ಮತದಾನ;

ಯಲಗೂರ ಗ್ರಾಮ ಪಂಚಾಯ್ತಿಗೆ ಶೇ 76.25 ಹಾಗೂ ಬಳಬಟ್ಟಿ ಗ್ರಾಮ ಪಂಚಾಯ್ತಿಗೆ ಶೇ 75.72 ರಷ್ಟು ಮತದಾನವಾಗಿದೆ.