ಯರಮರಸ್ ವಿಮಾನ ನಿಲ್ದಾಣ : ಶ್ರೀ ಗುರು ರಾಘವೇಂದ್ರ ಸ್ವಾಮಿ ನಾಮಕರಣಕ್ಕೆ ನಿರ್ಣಯ

ರಾಯಚೂರು.ಜೂ.೧೧- ನಗರದ ಯರಮರಸ್ ವಿಮಾನ ನಿಲ್ದಾಣ ಮೀಸಲು ಸ್ಥಳದಲ್ಲಿ ನಿರ್ಮಾಣಗೊಳ್ಳುವ ವಿಮಾನ ನಿಲ್ದಾಣಕ್ಕೆ ಶ್ರೀ ಗುರು ರಾಘವೇಂದ್ರ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಲು ನಗರಸಭೆಯಲ್ಲಿ ಸರ್ವಾನುಮತ ನಿರ್ಣಯ ಕೈಗೊಳ್ಳಲಾಯಿತು.
ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಮಂಡಿಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ನಾಮಕರಣ ಮಾಡಲು ಈಗಾಗಲೇ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್, ಅಧ್ಯಕ್ಷ ಈ.ವಿನಯಕುಮಾರ ಹಾಗೂ ಸದಸ್ಯರಾದ ಬಿ.ರಮೇಶ,ಈ.ಶಶಿರಾಜ, ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠ ಸಹಾಯಕರು ನೀಡಿದ ಪತ್ರವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು.
ಗುರು ರಾಘವೇಂದ್ರ ಸ್ವಾಮಿಗಳ ಹೆಸರು ನಾಮಕರಣಕ್ಕೆ ಸಂಬಂಧಿಸಿ ಸಾಮಾನ್ಯ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು. ಆರಂಭದಲ್ಲಿ ಮಾತನಾಡಿದ ಈ.ಶಶಿರಾಜ ಅವರು, ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಮೂಲಕ ಪವಿತ್ರ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಜಯಣ್ಣ ಅವರು ಮಾತನಾಡುತ್ತಾ, ರಾಘವೇಂದ್ರ ಸ್ವಾಮಿಗಳ ಹೆಸರು ನಾಮಕರಣ ಮಾಡಲು ಒಪ್ಪಿಗೆ ನೀಡಲಾಗುತ್ತಿದೆ. ಗುರು ರಾಯರ ಭಕ್ತರು ನಾಡು ಮತ್ತು ವಿಶ್ವದಾದ್ಯಂತ ಇದ್ದಾರೆ. ಇಂತಹವರ ನಾಮಕರಣ ಮಾಡುವ ಪ್ರಸ್ತಾಪ ಈ ಸಭೆಗೆ ಬಂದಿರುವುದು ನಮ್ಮ ಹಿರಿಮೆ ಮತ್ತು ಗರಿಮೆ ಹೆಚ್ಚಿಸಿದೆ. ಇದೊಂದು ಸುದೈವ ಕಾರ್ಯವೆಂದು ಸರ್ವಾನುಮತದಿಂದ ಅಂಗೀಕರಿಸಲಾಗುತ್ತದೆ.
ಸಣ್ಣ ನರಸರೆಡ್ಡಿ ಅವರು ಮಾತನಾಡುತ್ತಾ, ವಿಮಾನ ನಿಲ್ದಾಣ ಇತಿಹಾಸವನ್ನು ಅಲ್ಲಿ ಪ್ರಸ್ತಾಪಿಸಿ, ದೇಶದ ಪ್ರಥಮ ಪ್ರಧಾನಿ ನೆಹರು ಅವರು ಸಂಚರಿಸುತ್ತಿರುವ ವಿಮಾನ ಭೂ ಸ್ಪರ್ಶ ಮಾಡಿತ್ತು. ಇದೊಂದು ಐತಿಹಾಸಿಕ ಸ್ಥಳವಾಗಿದೆಂದು ನೆನಪಿಸಿದರು. ಅಧ್ಯಕ್ಷ ಈ.ವಿನಯಕುಮಾರ ಅವರು ಮಾತನಾಡುತ್ತಾ, ಈ ನಿರ್ಣಯ ಪತ್ರವನ್ನು ರಾಜ್ಯ, ರಾಷ್ಟ್ರ ಸರ್ಕಾರಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೇ, ವಿಮಾನ ಪ್ರಾಧಿಕಾರಕ್ಕೂ ನೀಡಲಾಗುತ್ತದೆಂದು ಹೇಳಿದ ಅವರು, ಈ ವಿಷಯವನ್ನು ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಗಮನಕ್ಕೂ ತರಲಾಗುತ್ತದೆಂದು ಹೇಳಿದರು.