ಯರಮರಸ್ ದಂಡು ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತ ಸ್ಥಳ

ಶಾಸಕ ಕೆ.ಶಿವನಗೌಡ ನಾಯಕ – ತ್ರಿವಿಕ್ರಮ ಜೋಷಿ ಪ್ರಯತ್ನ ಯಶಸ್ವಿ
ರಾಯಚೂರು.ಏ.೨೮- ನಗರದ ಹೊರ ವಲಯದ ಯರಮರಸ್ ದಂಡುವಿನಲ್ಲಿ ಮೀಸಲಿಟ್ಟ ೪೦೦ ಎಕರೆ ಜಮೀನು ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತವಾಗಿದೆಂದು ಭಾರತೀಯ ವಿಮಾನಯಾನ ಪ್ರಾಧಿಕಾರ ಅಧ್ಯಯನ ವರದಿ ನೀಡಿದೆ.
ಕಳೆದ ತಿಂಗಳು ಮಾರ್ಚ್ ೧೯ ರಂದು ಉಪ ಪ್ರಧಾನ ವ್ಯವಸ್ಥಾಪಕರಾದ ಅನುರಾಗ ಮಿಶ್ರಾ ಅವರ ನೇತೃತ್ವದಲ್ಲಿ ತಂಡ ದಂಡು ಪ್ರದೇಶದಲ್ಲಿರುವ ಸಾಧಕ, ಬಾಧಕ ಬಗ್ಗೆ ಪರಿಶೀಲನೆ ನಡೆಸಿತು. ಇವರೊಂದಿಗೆ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯವಾದ ಇನ್ನಿತರ ಸೌಲಭ್ಯಗಳ ಅಧ್ಯಯನಕ್ಕೂ ತಾಂತ್ರಿಕ ಸಮಿತಿ, ಯೋಜನಾ ಸಮಿತಿ ಹವಾ ತೀವ್ರತೆ ಅಧ್ಯಯನ ಸಮಿತಿ ಮತ್ತು ಇತರೆ ಅಡ್ಡಿ ಆತಂಕಗಳ ಅಧ್ಯಯನ ಸಮಿತಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಸ್ಥಳ ಪರಿಶೀಲನೆ ನಂತರ ದೆಹಲಿಗೆ ತೆರಳಿದ ಈ ತಂಡ ನಿನ್ನೆ ತನ್ನ ವರದಿಯನ್ನು ಸಲ್ಲಿಸಿದೆ.
ದಂಡು ಪ್ರದೇಶದಲ್ಲಿರುವ ವಿಮಾನ ನಿಲ್ದಾಣ ನಿರ್ಮಾಣ ಮೀಸಲು ಪ್ರದೇಶ ವಿಮಾನ ನಿಲ್ದಾಣ ಸ್ಥಾಪನೆಗೆ ಸೂಕ್ತವಾಗಿದೆಂದು ವರದಿ ನೀಡುವ ಮೂಲಕ ಬಹುದಿನಗಳ ಕನಸಾಗಿ ಉಳಿದಿದ್ದ ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಜೀವ ತುಂಬಿದಂತಾಗಿದೆ. ವೈಟಿಪಿಎಸ್ ನಿರ್ಮಾಣದ ಹಿನ್ನೆಲೆಯಲ್ಲಿ ಮತ್ತು ಚಿಮುಣಿ ಹಾರಾಟಕ್ಕೆ ಅಡ್ಡಿಯಾಗುವ ಸಂಶಯಗಳು ತೀವ್ರವಾಗಿದ್ದವು. ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಅಧ್ಯಯನ ನಡೆಸಿ, ಇರುವ ಎಲ್ಲಾ ಗೊಂದಲ ನಿವಾರಿಸಿದ್ದಾರೆ.
ಅಲ್ಲದೇ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ದಂಡು ಪ್ರದೇಶ ಸೂಕ್ತ ಎನ್ನುವ ವರದಿ ನೀಡುವ ಮೂಲಕ ಐತಿಹಾಸಿಕ ಹಿನ್ನೆಲೆ ಹೊಂದಿದ ೧೯೫೭ ರಲ್ಲಿ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹಾರಲಾಲ್ ನೆಹರು ಅವರು ಸಂಚರಿಸುತ್ತಿದ್ದ ಮೇಗಧೂತ ವಿಮಾನ ಭೂಸ್ಪರ್ಶಿಸಿದ ಇಲ್ಲಿ ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ದೊರೆಯುವಂತೆ ಮಾಡಿದೆ. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮತ್ತು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಅವರ ಅವಿರತ ಪ್ರಯತ್ನ ಕೊನೆಗೂ ವಿಮಾನ ನಿಲ್ದಾಣ ಸ್ಥಾಪನೆಯ ಕನಸು ನನಸಾಗುವಂತೆ ಮಾಡಿದೆ.
ಯರಮರಸ್ ದಂಡು ಬಳಿ ವಿಮಾನ ನಿಲ್ದಾಣಕ್ಕೆ ಮೀಸಲಿರಿಸಿದ ೪೦೦ ಎಕರೆ ಪ್ರದೇಶದ ಬದಲಾಗಿ ಸಿಂಗನೋಡಿಗೆ ಇದನ್ನು ಸ್ಥಳಾಂತರಿಸಬೇಕು ಎನ್ನುವ ಚರ್ಚೆ ಗಂಭೀರವಾಗಿರುವ ಹಂತದಿಂದಲೂ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಯಾವುದೇ ಕಾರಣಕ್ಕೂ ಯರಮರಸ್ ದಂಡು ಪ್ರದೇಶದಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪಟ್ಟು ಹಿಡಿದು ನಡೆಸಿದ ಪ್ರಯತ್ನ ಈಗ ಒಂದು ಪ್ರಮುಖ ಹಂತ ದಾಟಿದಂತಾಗಿದೆ. ಶಿವನಗೌಡ ಮತ್ತು ತ್ರಿವಿಕ್ರಮ ಜೋಷಿ ಈ ಉಭಯರು ಕಳೆದ ಅನೇಕ ತಿಂಗಳಿಂದ ದೆಹಲಿ, ಬೆಂಗಳೂರು ಮಧ್ಯೆ ಸಂಚರಿಸುವ ಮೂಲಕ ವಿಮಾನ ನಿಲ್ದಾಣ ಸ್ಥಾಪನೆಗೆ ಅಗತ್ಯವಾದ ಪ್ರಾಧಿಕಾರದ ಅರ್ಹತಾ ಪ್ರಮಾಣ ಪತ್ರಕ್ಕೆ ಪ್ರಯತ್ನ ನಡೆಸಿದ್ದರು.
ಇವರ ಪ್ರಯತ್ನದ ಫಲವಾಗಿ ವಿಮಾನಯಾನ ಪ್ರಾಧಿಕಾರದ ತಂಡ ಯರಮರಸ್ ದಂಡುವಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಏ.೧೯ ರಂದು ಕೊರೊನಾದ ಮಧ್ಯೆಯೂ ತ್ರಿವಿಕ್ರಮ ಜೋಷಿ ಅವರು ದೆಹಲಿಗೆ ತೆರಳಿ, ಅನುರಾಗ ಮಿಶ್ರಾ ಅವರನ್ನು ಭೇಟಿಯಾಗಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಇರುವ ಎಲ್ಲಾ ಅನುಮಾನ ನಿವಾರಣೆ ನಂತರ ಕೊನೆಗೂ ವಿಮಾನ ನಿಲ್ದಾಣ ಸ್ಥಾಪನೆಗೆ ಸ್ಥಳ ಯೋಗ್ಯತೆಯ ವರದಿಯೂ ಹೊರ ಬಿದ್ದಿದೆ.
ದಂಡು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಯೋಗ್ಯ ಎನ್ನುವ ಅರ್ಹತಾ ಪ್ರಮಾಣ ಪತ್ರದೊಂದಿಗೆ ದಂಡು ಪ್ರದೇಶದ ೪೦೦ ಎಕರೆ ಮಾರಾಟ ಮಾಡುವ ಹುನ್ನಾರಕ್ಕೆ ತೆರೆಬಿದ್ದಂತಾಗಿದೆ. ವಿಮಾನಯಾನ ಪ್ರಾಧಿಕಾರದಿಂದ ವಿಮಾನ ನಿಲ್ದಾಣ ಸ್ಥಾಪನೆಗೆ ಯೋಗ್ಯ ಸ್ಥಳ ಎನ್ನುವ ಪ್ರಮಾಣ ಪತ್ರ ತರುವಲ್ಲಿ ಯಶಸ್ವಿಯಾದ ಶಾಸಕ ಕೆ.ಶಿವನಗೌಡ ನಾಯಕ ಮತ್ತು ತ್ರಿವಿಕ್ರಮ ಜೋಷಿ ಅವರು ವಿಮಾನ ನಿಲ್ದಾಣ ಸ್ಥಾಪನೆಗೆ ಅವಿರತ ಪ್ರಯತ್ನದ ಜವಾಬ್ದಾರಿಯೂ ಈ ಉಭಯರ ಮೇಲಿದೆ.