ಯರನಾಳದಲ್ಲಿ ಕೃಷಿ ಕಾಲೇಜ್ ವಿದ್ಯಾರ್ಥಿಗಳಿಂದ ಎನ್‍ಎಸ್‍ಎಸ್ ಶಿಬಿರ

ವಿಜಯಪುರ,ಜ.29:ವಿಜಯಪುರ ಕೃಷಿ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ 2023-24 ವಿಶೇಷ ಶಿಬಿರವನ್ನು ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಎಸ್ . ಶಿರಹಟ್ಟಿ ಅವರು ಹಾಗೂ ಅಧ್ಯಕ್ಷತೆಯನ್ನು ವಹಿಸಿರುವ ಕೃಷಿ ಮಹಾವಿದ್ಯಾಲಯದ ವಿಧ್ಯಾಧಿಕಾರಿ ಡಾ . ಭೀಮಪ್ಪ ಎ. ಅವರು ಮತ್ತು ಶಾಂತಾಬಾಯಿ ಶಿವಪ್ಪ ಕುಲಕಾರಬ ಅವರು ಸಸಿಗೆ ನೀರುಣಿಸುವ ಮೂಲಕ ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮುಖ್ಯ ಅತಿಥಿ ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಎಸ್ . ಶಿರಹಟ್ಟಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಶಿಬಿರದ ಉದ್ದೇಶಗಳನ್ನು ಈಡೇರುವಂತೆ ಕೆಲಸ ಮಾಡಲು ಸಲಹೆ ನೀಡಿದರು. ಇನ್ನೋರ್ವ ಅತಿಥಿಗಳಾದ ಯರನಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಕಲ್ಲಪ್ಪ ಜಾಲಗೇರಿ ಅವರು ಗ್ರಾಮದಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿಶೇಷವಾಗಿ ಈ ಭಾಗದ ಬೆಳೆಗಳಲ್ಲಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಬೇಕಾದ ಮಾಹಿತಿಯನ್ನು ರೈತರಿಗೆ ತಲುಪಿಸಲು ಶಿಬಿರಾರ್ಥಿ ಹಾಗೂ ವಿಜ್ಞಾನಿಗಳಲ್ಲಿ ಕೇಳಿಕೊಂಡರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಡಾ . ಭೀಮಪ್ಪ ಎ. ಅವರು ಮಾತನಾಡಿ, ಗ್ರಾಮಸ್ಥರೊಂದಿಗೆ ಚರ್ಚಿಸುತ್ತಾ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಈ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲು ಸೂಚನೆ ನೀಡಿದರು.

ಡಾ. ರಮೇಶ ಬೀರಗೆ ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಶಿಬಿರದಲ್ಲಿ ಎನ್. ಎಸ್. ಎಸ್. ಸಂಯೋಜಕ ಡಾ. ಬಂಗಾರೆಮ್ಮ ಒಡೆಯರ್ ಹಾಗೂ ಡಾ . ಸಾವಿತ್ರಿ ಪಾಟೀಲ ಮತ್ತು ಊರಿನ ಮುಖಂಡರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.