ಯರಗನಹಳ್ಳಿ ಗ್ರಾ.ಪಂ ಬಿಜೆಪಿ ಬೆಂಬಲಿತರ ವಶಕ್ಕೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.01:- ತಾಲೂಕಿನ ಯರಗನಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯು ಸೋಮವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಬಿಜೆಪಿ ಬೆಂಬಲಿತರ ವಶವಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಬೆಜೆಪಿ ಬೆಂಬಲಿತ ಅಭ್ಯರ್ಥಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿ. ಕೆ. ರಾಜಶೇಖರಮೂರ್ತಿ ನಾಮಪತ್ರ ಸಲ್ಲಿಸಿದ್ದರು. ನಂತರ ಇವರಿಗೆ ಗ್ರಾಮ ಪಂಚಾಯತಿ ಆವರಣದಲ್ಲಿಯೇ ಚುನಾವಣೆ ನಡೆಸಲಾಯಿತು. ಈ ವೇಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಮಾರಸ್ವಾಮಿ 9 ಮತಗಳನ್ನು ಪಡೆದು ಜಯಶೀಲರಾದರೆ, ವಿ. ಕೆ. ರಾಜಶೇಖರಮೂರ್ತಿ 8 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಸಂತೇಮರಹಳ್ಳಿಯ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ಅಧಿಕಾರಿ ವಿಶ್ವನಾರಾಯಣ ಅಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ, ಉಪಾಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಿದರು.
ನಂತರ ಗ್ರಾಮ ಪಂಚಾಯತಿ ಆವರಣದಲ್ಲಿ ಬಿಜೆಪಿ ಮುಖಂಡರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸೋಮಲಿಂಗಪ್ಪ, ಮೀನಾಕ್ಷಿ, ನಾಗಮಲ್ಲಶೆಟ್ಟಿ, ಪಾರ್ವತಮ್ಮ, ಜಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದಪ್ಪ, ಮಹಾಶಕ್ತಿ ಕೇಂದ್ರದ ಉಪಾಧ್ಯಕ್ಷ ಕಿಲಗೆರೆ ಬೆಳ್ಳಪ್ಪ, ಅರಕಲವಾಡಿ ಮಹೇಶ್, ರಾಜಶೇಖರಮೂರ್ತಿ, ಎಪಿಎಂಸಿ ಸದಸ್ಯ ರವಿಕುಮಾರ್, ಶ್ರೀಕಂಠಪ್ಪ, ಬಂಗಾರನಾಯ್ಕ, ಗುರುಸ್ವಾಮಿ, ಶಿವಕುಮಾರ್ ಸೇರಿದಂತೆ ಇತರರಿದ್ದರು.