ಯಧುವೀರ್‍ಗೆ ನಾಯಕ ಸಮುದಾಯದ ಬೆಂಬಲ

ಸಂಜೆವಾಣಿ ನ್ಯೂಸ್
ಮೈಸೂರು: ಏ.20:- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ನಾಯಕ ಸಮುದಾಯದ ಮೈಸೂರು-ಚಾಮರಾಜನಗರ ಜಿಲ್ಲೆಯ ಮುಖಂಡರುಗಳು ಬೆಂಬಲ ಘೋಷಿಸಿದ್ದಾರೆ.
ಶುಕ್ರವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಅಪ್ಪಣ್ಣ, ಮೈಸೂರು-ಚಾಮರಾಜನಗರ ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಎಂ.ಶಿವಕುಮಾರ್, ವಿಧಾನಪರಿಷತ್‍ನ ಮಾಜಿ ಸದಸ್ಯ ಸಿದ್ದರಾಜು, ಜೆಡಿಎಸ್‍ನ ಮುಖಂಡ ಚಿಕ್ಕಣ್ಣ ಜಯಪ್ರಕಾಶ್, ಚಾಮರಾಜನಗರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಪಡುವಾರಹಳ್ಳಿ ರಾಮಕೃಷ್ಣ ಮತ್ತಿತರರು ಜಂಟಿಯಾಗಿ ಮೈಸೂರು-ಕೊಡಗು, ಚಾಮರಾಜನಗರ ಮೀಸಲು ಲೋಕಸಭೆ, ಮಂಡ್ಯ ಹಾಗೂ ಹಾಸನ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದರು. ಅಭ್ಯರ್ಥಿಗಳಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಸ್.ಬಾಲರಾಜ್, ಹೆಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣರ ಗೆಲುವಿಗಾಗಿ ಸಮುದಾಯದ ಮುಖಂಡರುಗಳೆಲ್ಲಾ ಶ್ರಮಿಸುವುದಾಗಿ ತಿಳಿಸಿದರು.
ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಅಪ್ಪಣ್ಣ ಮಾತನಾಡಿ, ನಾಯಕ ಸಮುದಾಯದ ಪರ್ಯಾಯ ಪದಾಗಳಾದ ಪರಿವಾರ, ತಳವಾರಗಳನ್ನು ಎಸ್ಟಿಗೆ ಸೇರಿಸಿದ್ದು ಬಿಜೆಪಿ ಸರ್ಕಾರ. ಸಂಸದ ಪ್ರತಾಪ್ ಸಿಂಹ ಅವರು ನಿರಂತರವಾಗಿ ಪ್ರಯತ್ನ ನಡೆಸಿ, ಈ ಪರ್ಯಾಯ ಪದಗಳನ್ನು ಎಸ್ಟಿಗೆ ಸೇರಿಸುವಲ್ಲಿ ನೆರವಾಗಿದ್ದಾರೆ. ಇತಿಹಾಸದಲ್ಲಿ ಸಮುದಾಯದ ನಾಲ್ವರನ್ನು ಸಚಿವರನ್ನಾಗಿ ಮಾಡಿದ್ದು ಬಿಜೆಪಿ. ವಿಧಾನಪರಿಷತ್ ಸದಸ್ಯ ಸ್ಥಾನವನ್ನೂ ಸಮುದಾಯದವರಿಗೆ ನೀಡಿದೆ. ಈಗ ಎರಡು ಸಂಸದ ಕ್ಷೇತ್ರಗಳು ಹಾಗೂ 16 ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕ ಸಮುದಾಯದವರು ಆಯ್ಕೆಯಾಗಿ ಬರುವುದಕ್ಕೆ ಕಾರಣವಾಗಿದ್ದೂ ಕೂಡ ಬಿಜೆಪಿಯೇ. ಎಸ್ಟಿ, ಬೋವಿ, ಬಂಜಾರ ಮುಂತಾದ ಸಮುದಾಯಗಳ ಅಭಿವೃದ್ಧಿಗಾಗಿ ಅವುಗಳಿಗೆ ಪ್ರತ್ಯೇಕ ನಿಗಮಗಳನ್ನು ರಚಿಸಿದ್ದೂ ಕೂಡ ಬಿಜೆಪಿ ಸರ್ಕಾರವೇ. ವಾಲ್ಮೀಕಿ ಜಯಂತಿ ಆಚರಣೆ, ಭವನಗಳ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡಿಕೊಟ್ಟಿದೆ. ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ.
ಹೆಚ್.ಡಿ.ದೇವೇಗೌಡರ ಸರ್ಕಾರದಲ್ಲಿ ಸಮುದಾಯದ ಜಯಕುಮಾರ್ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಅಲ್ಲದೇ ಸಣ್ಣ, ಸಣ್ಣ ಹಿಂದುಳಿದ ಸಮುದಾಯಗಳಿಗೂ ಸಚಿವ ಸ್ಥಾನವನ್ನು ನೀಡಿದ್ದರು. ಹಾಗಾಗಿ ಸಮುದಾಯದ ಮುಖಂಡರೆಲ್ಲಾ ಸೇರಿ ಚರ್ಚಿಸಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಿ, ಅವರನ್ನು ಗೆಲ್ಲಿಸಲು ಶ್ರಮಿಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸ್ವಾತಂತ್ರ?ಯ ಬಂದು ಇಲ್ಲಿಯ ತನಕ ಕಾಂಗ್ರೆಸ್‍ನವರು ಎಸ್ಟಿ, ಎಸ್ಸಿಗಳ ಮತಗಳನ್ನು ಪಡೆದುಕೊಂಡು ಅಧಿಕಾರ ಅನುಭವಿಸಿಕೊಂಡು ಬಂದಿದ್ದಾರೆ. ಆದರೆ ಈ ಸಮುದಾಯಗಳಿಗೆ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಬದಲಿಗೆ ಮೂಗಿಗೆ ತುಪ್ಪ ಸವರಿಕೊಂಡು ಬರುತ್ತಾ, ಮೋಸ ಮಾಡುತ್ತಿದ್ದರು. ಆದರೆ ಬಿಜೆಪಿ ಮೀಸಲು ಕ್ಷೇತ್ರವಲ್ಲದೆ, ಸಾಮಾನ್ಯ ಕ್ಷೇತ್ರದಲ್ಲೂ ಕೂಡ ನಾಯಕ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡಿದೆ. ನನಗೆ ಮೂರು ಬಾರಿ ವಿಧಾನಸಭೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಶಿವಕುಮಾರ್ ಅವರನ್ನು ಆಯ್ಕೆ ಮಾಡಿದೆ. ಸಿದ್ದರಾಜು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ. ಹೀಗೆ ನಾಯಕ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ನಿರಂತರವಾಗಿ ಅವಕಾಶ ನೀಡುತ್ತಲೇ ಬಂದಿದೆ. ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ನಾಯಕ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸಿದೆ. ಹಾಗಾಗಿ ಉಪಕಾರ ಮಾಡಿದವರನ್ನು ಸ್ಮರಿಸುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಂವಿಧಾನದಿಂದಲೇ ದೇಶ ಸದೃಢವಾಗಿದೆ;
ನೆರೆಯ ದೇಶಗಳು ಸರಿಯಾದ ಸಂವಿಧಾನವಿಲ್ಲದ ಕಾರಣದಿಂದಾಗಿ ದಿವಾಳಿಯಾಗಿವೆ. ಆದರೆ ಭಾರತ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಭದ್ರವಾಗಿ ಸದೃಢವಾಗಿದ್ದು, ವಿಶ್ವದ ಮುಂದೆ ಪ್ರಬಲ ರಾಷ್ಟ್ರವಾಗಿ ನಿಂತಿದೆ. ಇಂತಹ ಸಂವಿಧಾನವನ್ನು ಸೃಷ್ಠಿಕರ್ತ ಬ್ರಹ್ಮನೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ. ದೇಶದಲ್ಲಿ ಎಸ್ಟಿ ಸಮುದಾಯದ 99 ಮಂದಿ ಸಂಸದರು, 594 ಮಂದಿ ಶಾಸಕರಿದ್ದಾರೆ. ಯಾವುದೇ ಕಾರಣಕ್ಕೂ ನಾವುಗಳು ಸಂವಿಧಾನ ಬದಲಾವಣೆ ಮಾಡುವ ಪ್ರಯತ್ನಕ್ಕೆ ಆಸ್ಪದ ನೀಡುವುದಿಲ್ಲ ಎಂದು ಗುಡುಗಿದರು.
ಕಾಂಗ್ರೆಸ್‍ನಿಂದ ಸುಳ್ಳು ಪ್ರಚಾರ;
ಮೈಸೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತಿದೆ ಎಂದು ವ್ಯಾಪಕವಾಗಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಸಂವಿಧಾನಕ್ಕೆ 80 ಬಾರಿ ತಿದ್ದುಪಡಿ ಮಾಡಿ, ಸಂವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಲು ಪ್ರಯತ್ನ ನಡೆಸಿರುವುದು ಕಾಂಗ್ರೆಸ್ ಪಕ್ಷವೇ. ಪ್ರಧಾನಿ ನರೇಂದ್ರಮೋದಿಯವರು ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ಮುಕ್ತ, ಕಳಂಕ ರಹಿತ ಆಡಳಿತವನ್ನು ನೀಡಿದ್ದಾರೆ. ಹಾಗಾಗಿ ಅವರ ಮೇಲೆ ಆರೋಪಿಸುವುದಕ್ಕೆ ಬೇರೆ ಯಾವುದೇ ವಿಷಯಗಳಿಲ್ಲದ ಕಾರಣ, ಕಾಂಗ್ರೆಸ್‍ನವರು ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ದೇಶದ ಜನರಲ್ಲಿ ಆತಂಕವನ್ನುಂಟು ಮಾಡಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಮುದ್ದುಕೃಷ್ಣ, ಮುಖಂಡರುಗಳಾದ ಪ್ರಸಾದ್, ಮರಿಸ್ವಾಮಿ, ಸಿದ್ದರಾಜು, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.