ಯತ್ನಾಳ ವಿರುದ್ಧ ನಿರಾಣಿ ಪರೋಕ್ಷ ವಾಗ್ದಾಳಿ

ವಿಜಯಪುರ, ಜ 7: ಬಿ. ಎಸ್. ಯಡಿಯೂರಪ್ಪ, ಹರಿಹರ ಪೀಠಾಧೀಶರು ಮತ್ತು ತಮ್ಮ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಟೀಕೆಗಳಿಗೆ ಸಚಿವ ಮುರುಗೇಶ ನಿರಾಣಿ ಅವರು ಯತ್ನಾಳ ಅವರ ಹೆಸರು ಹೇಳದೇ ಪರೋಕ್ಷ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ನನ್ನ ಬಗ್ಗೆ, ಸ್ವಾಮೀಜಿ ಬಗ್ಗೆ, ಸರಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದರೂ ಅವರ ಹಾವಭಾವ, ಮಾತುಗಳಲ್ಲಿ ಬದಲಾವಣೆಯಾಗಿಲ್ಲ. ಯಡಿಯೂರಪ್ಪ, ನಿರಾಣಿ, ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ನೀವು ಎಲ್ಲಿದ್ರೀ? ಇದನ್ನು ಅರ್ಥ ಮಾಡಿಕೊಳ್ಳಿ ಆತ್ಮಾವಲೋಕನ ಮಾಡಿಕೊಳ್ಳಿ. ಯಾವುದೇ ಸಮಾಜದೊಂದಿಗೆ ಭೇದಭಾವ ಇಲ್ಲದೆ ನಾವು ಅನ್ಯೋನ್ಯದಿಂದ ಇದ್ದೇವೆ. ಮುಂಬರುವ ದಿನಗಳಲ್ಲಿ ವಿಜಯಪುರ ಮತದಾರರು ಪಾಠ ಕಲಿಸಲಿದ್ದಾರೆ ಎಂದು ಸಚಿವರು ಕಿಡಿ ಕಾರಿದರು.
ಪಂಚಮಸಾಲಿ ಸಮುದಾಯಕ್ಕೆ 2ಡಿ ನಡಿ ಮೀಸಲಾತಿ ಬೇಕಾಗಿಲ್ಲ. 2ಎ ನಡಿ ಮೀಸಲಾತಿ ಬೇಕು ಎಂದು ಹೇಳುತ್ತಿದ್ದಾರೆ. ಈ ಮಾತನ್ನು ಹೇಳುವ ಬದಲು, ಯಾವ ಕೆಟಗರಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ ತಿಳಿದುಕೊಳ್ಳಲಿ. ಮೀಸಲಾತಿಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹಿಂದೆ ಇದೇ ವಿಚಾರಕ್ಕೆ ಬಿ ಎಸ್ ವೈ ಅವರು ಕ್ಯಾಬಿನೆಟ್ ಕಮೀಟಿ ಮಾಡಿದ್ದರು. ಅದರಲ್ಲಿ ನಾನು ಬೊಮ್ಮಾಯಿ ಸೇರಿ ಮೂವರು ಇದ್ದೇವು. ಆಗ ಈ ಸಮಾಜದ ಹೆಸರು ಯಾವುದೇ ಜಾತಿ ಕಾಲಂ ನಲ್ಲಿ ಇರಲಿಲ್ಲ ಎಂದು ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು
ಬಚ್ಚಾ ಎನ್ನುವ ನೀವು ಬುದ್ಧಿವಂತ, ಅತೀ ಬುದ್ಧಿವಂತ, ಎಲ್ಲರಿಗಿಂತಲೂ ಬುದ್ಧಿವಂತ ಇದ್ದೀರಲ್ಲ ಯಾವ ರೀತಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬುದರ ಕುರಿತು ನಮಗೆ ಮಾರ್ಗದರ್ಶನ ಮಾಡಿ. ನಿರಾಣಿ, ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಬದ್ಧತೆ ಇದೆ ಎಂದು ಅವರು ಹೇಳಿದರು.ನಾನೊಬ್ಬ ಉದ್ಯಮಿ, 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದೇನೆ ತಮ್ಮ ವ್ಯವಹಾರದ ಕುರಿತ ಮಾಡಿರುವ ಟೀಕೆಗೆ ಖಾರವಾಗಿಯೆ ಪ್ರತಿಕ್ರಿಯೆ ನೀಡಿದ ಸಚಿವ ನಿರಾಣಿ, ಜಗತ್ತಿನಲ್ಲೇ ನಂಬರ್ ಒನ್ ನಿರಾಣಿ ಗ್ರೂಪ್ ಆಫ್ ಕಂಪನಿ ಆಗಲಿದೆ. ನಿರಾಣಿ ಕಂಪನಿ ಸ್ವಂತ ಕಟ್ಟಿದ್ದೇನೆ. ಕಾರ್ಖಾನೆ ಮಾಡಿ ಶೇರು ಸಂಗ್ರಹಿಸಿ ಕೈಕೊಟ್ಟಿಲ್ಲ. ಹೈನುಗಾರಿಕೆಯನ್ನು ಮಾಡಿ ಶೇರು ಸಂಗ್ರಹಿಸಿಲ್ಲ. ನಾನು ಏನೇ ಮಾಡಿದ್ದರು ಉದ್ಯಮಿಯಾಗಿ ಮಾಡುತ್ತಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಮೀಸಲಾತಿ ವಿಚಾರವಾಗಿ ನಾವು ಹರಿಹರಕ್ಕೆ ಹೋಗ್ತಿವಿ ಎಂದು ಗೊತ್ತಾದಾಗ ಹರಿಹರಕ್ಕೆ ಹೋಗಲಿ, ಸುಡಗಾಡಕ್ಕೆ ಹೋಗಲಿ ಎಂದು ಮಾತಾಡಿದ್ದೀರಿ. ನೀವು ಯಾರಿಗೆ ಮಾತಾಡ್ತಿದಿರಿ, ಯಾವ ಪಕ್ಷದಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ನನಗೆ ಬಿಜೆಪಿ ಪಕ್ಷ ತಾಯಿ ಸಮಾನ. ನಿಮ್ಮ ಥರ ಒಂದು ಪಾರ್ಟಿಗೆ ಹೋದಾಗ ಒಂದೊಂದರಂತೆ ಟೋಪಿ ಹಾಕಿಕೊಂಡು ಮಾತನಾಡಲ್ಲ ಎಂದು ನಿರಾಣಿ ಟೀಕಿಸಿದರು.
ಚುನಾವಣೆಯಲ್ಲಿ ಚಾಲೆಂಜ್:
ನಿಂದು ತಾಕತ್ತ ಇದ್ರೆ ನಿನ್ನ ಎಲೆಕ್ಷನ್ ನಲ್ಲಿ ನೀನು ಮಾಡು, ನಾನು ನನ್ನ ಎಲೆಕ್ಷನ್ ಮಾಡುತ್ತೇನೆ. ಹುಡುಗಾಟ ಹಚ್ಚೀರಿ? ನೀನು ಗೆದ್ದು ತೋರಿಸು, ವಿಜಯಪುರ ಜನ ನಿನಗೆ 2023ರಲ್ಲಿ ಪಾಠ ಕಲಿಸುತ್ತಾರೆ ಎಂದು ಅವರು ಸವಾಲು ಹಾಕಿದರು.
ಕೂಡಲ ಸಂಗಮ, ಹರಿಹರ, ಜಮಖಂಡಿ ಮೂರು ಪೀಠ ಆಗಲು ನಂದೂ ಅಳಿಲು ಸೇವೆ ಇದೆ. ಶುಭ ಹಾಗೂ ಅಶುಭ ಕಾರ್ಯಕ್ಕೆ ಸ್ವಾಮೀಜಿಗಳು ಬೇಕು. ಪಂಚಮಸಾಲಿ ಪಂಚ ಪೀಠ ಆಗಬೇಕು. ಎಲ್ಲರೂ ಅಣ್ಣತಮ್ಮಂದಿರ ರೀತಿ ಬಾಳಬೇಕು ಎಂದರು.
ನಿರಾಣಿ ಬಳಿ ಸಿಡಿ ಇವೆ ಎಂದು ಯತ್ನಾಳ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ ಆರೋಪ ಮಾಡಿದವರು ಅವರೇ ಇರಬೇಕು. ಹಾಗಾಗಿ ಅವರಿಗೆ ಗೊತ್ತಿದೆ. ಯಾರು ಹೋಗಿ ಸ್ಟೇ ತಂದಿದ್ದಾರೆ ಅಂತ ಅವರಿಗೆ ಗೊತ್ತಿದೆ. ನಮಗೆ ಅಭಿವೃದ್ಧಿ ಕೆಲಸ ಮಾಡೋಕೆ 24 ಗಂಟೆ ಸಾಕಾಗುತ್ತಿಲ್ಲ. ಇಂಥಾದ್ದೆಲ್ಲ ನಾವು ಮಾಡಲ್ಲ ಎಂದು ಪರೋಕ್ಷವಾಗಿ ಯತ್ನಾಳ ವಿರುದ್ಧ ಅವರು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಯಾಕೆ ಮೀಸಲಾತಿ ನೀಡಲಿಲ್ಲ?:
2014ರಲ್ಲಿ ಪಂಚಮಸಾಲಿ ಸಮುಮದಾಯಕ್ಕೆ ಮೀಸಲಾತಿ ಕೇಳಲಾಗಿತ್ತು. ಆಗ ಮೌನ ವಹಿಸಿದ್ದ ಕಾಂಗ್ರೆಸ್ಸಿನ ಮಾಜಿ ಶಾಸಕರೊಬ್ಬರು ಈಗ ವೀರಾವೇಶದಿಂದ ಮಾತನಾಡುತ್ತಿದ್ದಾರೆ. ಆಗ ಕಾಂಗ್ರೆಸ್ ಯಾಕೆ ಮೀಸಲಾತಿ ನೀಡಿಲಿಲ್ಲ ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೆಸರು ಹೇಳದೆ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 9ಲಕ್ಷ 80ಸಾವಿರ ಕೋಟಿ ಕರ್ನಾಟಕಕ್ಕೆ ಹೂಡಿಕೆ ತಂದಿದ್ದೇವೆ. ಅವಳಿ ಜಿಲ್ಲೆಗಳಿಗೆ ಹತ್ತು ಸಾವಿರ ಕೋಟಿಗೂ ಹೆಚ್ಚು ಕೈಗಾರಿಕೆಯಷ್ಟು ಪ್ರದೇಶಗಳು ಬರುತ್ತಿವೆ. ಇನ್ನು ಐದು ಹೊಸ ಏರಪೆರ್Çೀರ್ಟ್ ಬರಲಿದ್ದು, ಹಲಕುರ್ಕಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಆಗಲಿವೆ. ಪ್ರತಿ 100 ಕಿ. ಮಿ. ಗೆ ಒಂದರಂತೆ ಕರ್ನಾಟಕದಲ್ಲಿ ಏರಪೆÇೀರ್ಟ ಆಗಲಿವೆ. 5000 ಕಿ. ಮೀ. ನಷ್ಟು ಕರ್ನಾಟಕದಲ್ಲಿ ಹೊಸ ನ್ಯಾಷನಲ್ ಹೈವೆ ಗಳು ಬರ್ತಿವೆ. ಏರ್, ರೋಡ್, ವಾಟರ್, ಕರೆಂಟ್ ಕನೆಕ್ಟಿವಿಟಿ ಬಂದಾಗ ಕೂಗಾರಿಕೆಗೆ ಅನುಕೂಲ ಆಗುತ್ತದೆ. ನಾನು ಕೈಗಾರಿಕೆ ಜವಾಬ್ದಾರಿ ತಗೊಂಡ ಮೇಲೆ ನಾನಾ ವಿಭಾಗದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ವಿವೇಕ ಡಬ್ಬಿ ಉಪಸ್ಥಿತರಿದ್ದರು