ಯತ್ನಾಳ್, ಈಶ್ವರಪ್ಪಗೆ ಆರ್‌ಎಸ್‌ಎಸ್ ಬಲ: ಸಿದ್ದು

ಮಸ್ಕಿ (ರಾಯಚೂರು).ಏ೬: ಶಾಸಕ ಬಸನಗೌಡ ಯತ್ನಾಳ ಹಾಗೂ ಸಚಿವ ಈಶ್ವರಪ್ಪ ಅವರಿಗೆ ಆರ್‌ಎಸ್‌ಎಸ್ ಮತ್ತು ಸಂತೋಷ ಅವರ ಬೆಂಬಲ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಬದಲಿಸಲು ಆರ್‌ಎಸ್‌ಎಸ್ ಬಯಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿರುವ ಅವರು ಮಂಗಳವಾರ ಪಗಡದಿನ್ನಿ ಕ್ಯಾಂಪ್‌ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ‘ಸರ್ಕಾರಕ್ಕೆ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿಯಿಲ್ಲ. ಸಚಿವ ಈಶ್ವರಪ್ಪ ಬರೆದ ಪತ್ರ ಗಂಭೀರ ವಿಚಾರ. ಬಸನಗೌಡ ಯತ್ನಾಳ್ ನಾಲ್ಕು ತಿಂಗಳಿಂದ ವಾಗ್ದಾಳಿ ಮಾಡುತ್ತಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ. ಮಂತ್ರಿ ಮಂಡಲದಲ್ಲಿ ಎಲ್ಲವೂ ಸರಿ ಇಲ್ಲ’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಏಕೆ ಸೇರಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾನು ಜೆಡಿಎಸ್ ಬಿಟ್ಟು ಬಂದಿಲ್ಲ. ಡಿಸಿಎಂ ಸ್ಥಾನದಿಂದ ಮಿಸ್ಟರ್ ದೇವೇಗೌಡ ಕಿತ್ತು ಹಾಕಿದ್ದಾರೆ. ಅಹಿಂದ ಕಟ್ಟಿದೆ. ಆನಂತರ ಕಾಂಗ್ರೆಸ್‌ನವರು ಕರೆದಿದ್ದಕ್ಕೆ ಸೇರಿದೆ. ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಪಕ್ಷ ಸೇರಿದ್ದೇನೆ. ಪ್ರತಾಪಗೌಡ ತರಹ ದುಡ್ಡು ತಗೊಂಡು ಕಾಂಗ್ರೆಸ್‌ಗೆ ಬಂದಿಲ್ಲ’ ಎಂದರು.
‘ವರುಣ ಕ್ಷೇತ್ರಕ್ಕೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೊಡುಗೆ ಏನಿದೆ? ವರುಣದಲ್ಲಿ ನಿಂತುಕೊಳ್ಳುತ್ತೇನೆ ಎಂದು ಹೇಳಿ ಏಕೆ ನಿಂತುಕೊಳ್ಳಲಿಲ್ಲ? ವಿಜಯೇಂದ್ರ ಚಾಣಕ್ಯ ಆಗಿದ್ದರೆ, ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದಾಗ ಎಲ್ಲಿ ಹೋಗಿದ್ದ. ವರುಣದಲ್ಲಿ ಯಾರಾದರೂ ಸ್ಪರ್ಧಿಸಲಿ, ಸ್ವಾಗತಿಸುತ್ತೇನೆ’ ಎಂದು ಹೇಳಿದರು.