ಯತ್ನಾಳ್ ಆರೋಪಕ್ಕೆ ಬಿಜೆಪಿ ಉತ್ತರಿಸಲಿ

ಹುಬ್ಬಳ್ಳಿ, ಡಿ೨೭: ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ಆಧಾರದ ಮೇಲಲ್ಲ. ಸಂವಿಧಾನದ ಆಧಾರದ ಮೇಲೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಹಿಂದುತ್ವದ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಈಗಿನ ಸರ್ಕಾರ ಹಾಗಲ್ಲ ಎಂದು ನುಡಿದರು.
೪೦ ಸಾವಿರ ಕೋಟಿ ರೂ.ಗಳ ಹಗರಣದ ಆರೋಪವಿದೆ, ಇದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪ ಅಲ್ಲ, ಮಾಜಿ ಕೇಂದ್ರ ಸಚಿವರು, ಹಾಲಿ ಶಾಸಕರು ಮಾಡಿದ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರಕ್ಕೂ ಪಾಲು ಹೋಗಿರಬಹುದು, ಹೆಣದ ಮೇಲೆ ಹಣ ಮಾಡಿದ್ದಾರೆ ಎಂದರೆ ಇದು ಮನುಷ್ಯತ್ವ ಅಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕುವವರು ಎಂಬ ಬಿ.ಕೆ. ಹರಿಪ್ರಸಾದರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಅದರಲ್ಲಿ ತಪ್ಪೇನಿದೆ? ಎಂದ ಖರ್ಗೆ ಕ್ಷಮಾಪಣೆ ಬರೆದಿದ್ದು ಯಾರು? ಬ್ರಿಟಿಷರ ಬಳಿ ಪೆನ್‌ಶನ್ ತೆಗೆದುಕೊಂಡಿದ್ದು ಯಾರು? ಎಂದು ತಿರುಗೇಟು ನೀಡಿದರು.
ಬಿಜೆಪಿ ಮತ್ತು ಆರ್.ಎಸ್.ಎಸ್.ಗೆ ಸ್ವಂತ ಇತಿಹಾಸವಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ ಎಂದ ಅವರು, ಇವರುಗಳು ವಾಟ್ಸಪ್ ಯುನಿವರ್ಸಿಟಿಯಲ್ಲಿ ಸುಳ್ಳು ಹಬ್ಬಿಸುತ್ತಾರೆ, ಅದನ್ನು ಯುವಕರು ನಂಬುತ್ತಾರೆ ಎಂದು ಕುಟುಕಿದರು.