ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲು ಆಗ್ರಹ

ವಿಜಯಪುರ:ಮೇ.16: ಕೇವಲ ತಮ್ಮ ಶಕ್ತಿ ಸಾಮಥ್ರ್ಯ ಹಾಗೂ ಬಿಜೆಪಿಯ ಕಟ್ಟಾ ಮತಗಳಿಂದ ಜಿಲ್ಲೆಯ ಎಂಟು ವಿಧಾನಸಭಾ ಸ್ಥಾನಗಳಲ್ಲಿ ಕಮಲ ಪಕ್ಷದ ಏಕೈಕ ಶಾಸಕರಾಗಿ ಹೊರಹೊಮ್ಮಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲೊಬ್ಬರಾಗಿರುವ ವಿಜಯಪುರ ನಗರ ಮತಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದು ಜಿಲ್ಲೆಯ ಸಮಾಜ ಸೇವಕ ಹಾಗೂ ಯುವ ಮುಖಂಡ ಮಂಜುನಾಥ.ಎಸ್.ಕಟ್ಟಿಮನಿ ಅವರು ಆಗ್ರಹಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ಯತ್ನಾಳ ಅವರು ಉತ್ತರ ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ತಮ್ಮ ನೇರ ನುಡಿಯ ಮೂಲಕ ಕಮಲ ಪಾಳೆಯದ ಫೈಯರ್ ಬ್ರಾಂಡ್ ರಾಜಕಾರಣಿ ಎನಿಸಿರುವ ಯತ್ನಾಳ್ ಅವರು ತಮ್ಮ ಅಪಾರ ರಾಜಕೀಯ ಅನುಭವ, ಧೀಮಂತಿಕೆಯ ವ್ಯಕ್ತಿತ್ವ ಹಾಗೂ ಪ್ರಖರ ಮಾತಿನ ಶೈಲಿಯ ಮೂಲಕ ಆಡಳಿತ ಪಕ್ಷವನ್ನು ಕಟ್ಟಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯ ಗುರುತರ ಸಂದರ್ಭದಲ್ಲಿಯೂ ಅವರ ಈ ಶಕ್ತಿ ಸಾಮಥ್ರ್ಯದಿಂದಾಗಿ ಪಕ್ಷಕ್ಕೆ ಇನ್ನಷ್ಟು ಬಲ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಯತ್ನಾಳ್ ಅವರನ್ನೇ ವಿಪಕ್ಷದ ನಾಯಕರನ್ನಾಗಿ ನೇಮಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಪಾರ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಅಲ್ಲದೆ ಪ್ರತಿಯೊಬ್ಬರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಸಾಮಥ್ರ್ಯವುಳ್ಳ ಅದರಲ್ಲೂ ವಿಶೇಷವಾಗಿ ಪ್ರಬಲ ಹಿಂದುತ್ವದ ಪ್ರತಿಪಾದಕರಾಗಿ ಪ್ರತಿ ಹಿಂದುವಿನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುವ ಹಿಂದೂ ಹುಲಿ ಎಂದೇ ಹೆಸರುವಾಸಿಯಾಗಿರುವ ಯತ್ನಾಳ ಅವರನ್ನು ವಿಪಕ್ಷದ ನಾಯಕರನ್ನಾಗಿ ನೇಮಿಸುವುದು ಹಿಂದೂ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಬಿಜೆಪಿ ಪಕ್ಷಕ್ಕೆ ಇವರಿಂದ ಬಹಳ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಇವರ ಆಯ್ಕೆ ಬಹಳ ಸೂಕ್ತವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.