ಯತ್ನಾಳ್ ಅಮಾನತಿಗೆ ಹೆಚ್ಚಿದ ಒತ್ತಡ

ಬೆಂಗಳೂರು, ಡಿ. ೨೮- ಸ್ವಪಕ್ಷೀಯರ ವಿರುದ್ಧವೇ ಬಹಿರಂಗವಾಗಿ ಟೀಕೆಗಳನ್ನು ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದಿಂದ ಅಮಾನತು ಆಗುವ ಸಾಧ್ಯತೆಗಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳ ಬಗ್ಗೆ ಚರ್ಚೆಯಾಗಿದ್ದು, ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಪಕ್ಷದ ಕೇಂದ್ರ ನಾಯಕರಿಗೆ ಶಿಫಾರಸ್ಸು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ನಿನ್ನೆ ನಡೆದ ಪಕ್ಷದ ನೂತನ ಪದಾಧಿಕಾರಿಗಳ ಸಭೆಯಲ್ಲೂ ಯತ್ನಾಳ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಪಕ್ಷದಿಂದ ಅಮಾನತ್ತು ಮಾಡಬೇಕು ಎಂಬ ಒತ್ತಾಯವನ್ನು ಕೆಲ ನಾಯಕರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರನ್ನು ಅಮಾನತು ಮಾಡುವಂತೆ ಕೇಂದ್ರ ಬಿಜೆಪಿ ನಾಯಕರಿಗೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಬಿಜೆಪಿಯ ಹಿರಿಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪದೇ ಪದೇ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜತೆಗೆ ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬವನ್ನು ಗುರಿಯಾಗಿಸಿ ನಿರಂತರ ವಾಗ್ದಾಳಿ ನಡೆಸಿದ್ದರು. ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಸರ್ಕಾರವಿದ್ದಾಗ ಕೋವಿಡ್ ಸಂದರ್ಭದಲ್ಲಿ ೪೦ ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದು ಬಿಜೆಪಿ ನಾಯಕರಿಗೆ ಸಾಕಷ್ಟು ಇರಿಸು-ಮುರಿಸು ತಂದಿತ್ತು.
ಯತ್ನಾಳ್ ಅವರ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ರಾಜ್ಯ ಬಿಜೆಪಿ ನಾಯಕರು, ಯತ್ನಾಳ್ ಶಿಸ್ತು ಉಲ್ಲಂಘಿಸಿದ್ದಾರೆ. ಅವರನ್ನು ಅಮಾನತು ಮಾಡಿ ಎಂದು ಕೇಂದ್ರ ಬಿಜೆಪಿ ನಾಯಕರಿಗೆ ಶಿಫಾರಸ್ಸು ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಅವರಿಗೆ ಕಡಿವಾಣ ಹಾಕದಿದ್ದರೆ ಮುಂದೆ ಇತರ ನಾಯಕರುಗಳು ಇದೇ ಹಾದಿ ತುಳಿಯಬಹುದು. ಹಾಗಾಗಿ ಯತ್ನಾಳ್ ಅವರಿಗೆ ಶಿಸ್ತು ಉಲ್ಲಂಘನೆಯ ನೋಟಿಸ್ ನೀಡಿ ಅವರನ್ನು ಅಮಾನತು ಮಾಡಿ ಎಂದು ರಾಜ್ಯ ನಾಯಕರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯತ್ನಾಳ್ ಅವರು ಎರಡು ದಿನಗಳ ಹಿಂದೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದರೆ ಬಿಜೆಪಿ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದೆಲ್ಲಾ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಯತ್ನಾಳ್ ಅವರನ್ನು ಅಮಾನತು ಮಾಡಿ, ಇಲ್ಲದಿದ್ದರೆ ಇವರ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ರಾಜ್ಯ ನಾಯಕರು ಕೇಂದ್ರ ನಾಯಕರಿಗೆ ಮಾಡಿರುವ ಶಿಫಾರಸ್ಸಿನಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ.