ಯತೀಶ್ವರ ಶ್ರೀಗಳ ೪೮ನೇ ಜನ್ಮ ಜಯಂತಿ

ಚಿಕ್ಕನಾಯಕನಹಳ್ಳಿ, ಆ. ೩- ಕುಪ್ಪೂರು ಗದ್ದಿಗೆ ಮಠದ ಅಭಿವೃದ್ದಿ ಹರಿಕಾರ, ತಾಲ್ಲೂಕಿನ ರೈತರ ಪರ ಹೋರಾಟಗಾರರಾಗಿದ್ದ ಲಿಂಗೈಕ್ಯ ಡಾ. ಶ್ರೀ ಯತೀಶ್ವರ ಶಿವಾಚಾರ್ಯಸ್ವಾಮೀಜಿಯವರು ಸಾರ್ಥಕವಾಗಿ ತಮ್ಮ ಬದುಕನ್ನು ಸಾಗಿಸಿದರು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ಲಿಂಗೈಕ್ಯ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ೪೮ನೇ ವರ್ಷದ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಪ್ಪೂರು ಗದ್ದಿಗೆ ಮಠದ ಹಿರಿಯ ಶ್ರೀಗಳಿಗೂ ನನಗೂ ಅವಿನೋಭಾವ ಸಂಬಂಧವಿದೆ. ಅವರ ಮಾರ್ಗದರ್ಶನದಲ್ಲಿ ಮಠಕ್ಕೆ ಯತೀಶ್ವರರನ್ನು ಮಠಾಧ್ಯಕ್ಷರನ್ನಾಗಿ ಅಧಿಕಾರ ನೀಡಲಾಯಿತು. ಅತೀ ಚಿಕ್ಕ ವಯಸ್ಸಿನಲ್ಲಿ ಅಧಿಕಾರ ಪಡೆದು ಮಠಕ್ಕೆ ಭಕ್ತರನ್ನು ಪ್ರೀತಿ-ವಿಶ್ವಾಸದಿಂದ ಬರ ಮಾಡಿಕೊಳ್ಳುತ್ತಿದ್ದರು ಎಂದರು.
ಶ್ರೀಗಳು ಮನಸ್ಸಿನಲ್ಲಿ ಸಂಕಲ್ಪ ಮಾಡಿದ ಕೆಲಸ ಕಾರ್ಯಗಳನ್ನು ಶಕ್ತಿಮೀರಿ ನಿಭಾಯಿಸುತ್ತಿದ್ದರು. ತಾಲ್ಲೂಕಿನ ಜನಪರ ಹೇಮಾವತಿ ನೀರಾವರಿ ಹೊರಾಟಗಳಲ್ಲಿ ಮುಂಚೂಣಿಯಾಗಿದ್ದ ಶ್ರೀಗಳ ಅಕಾಲಿಕ ಮರಣದಿಂದ ಎಲ್ಲರಿಗೂ ನೋವುಂಟಾಗಿದೆ ಎಂದರು.
ಶ್ರೀಗಳ ಜೀವತದ ಕನಸು ಶ್ರೀ ಮಠವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮಹತ್ತರವಾದ ಆಶಾ ಭಾವನೆ ಹೊಂದಿದ್ದರು. ಮಠದ ಅಭಿವೃದ್ದಿಗೆ ಸರ್ಕಾರದಿಂದ ೫೦ ಲಕ್ಷ ರೂ. ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಕುಪ್ಪೂರು ಗದ್ದಿಗೆಯ ಮುಖ್ಯಸ್ಥರಾದ ವಾಗೀಶ್ ಪಂಡಿತಾರಾದ್ಯ, ಸಾರ್ಥವಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.