ಯತೀಂದ್ರರಿಗೆ ಎಂಎಲ್‍ಸಿ ಸ್ಥಾನ ಕೊಡಿ: ಹರೀಶ್‍ಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಅವರನ್ನು ಪಕ್ಷವು ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಕೆ.ಹರೀಶ್‍ಗೌಡ ಮನವಿ ಮಾಡಿದರು.
ಕನ್ನಡ ಸ್ನೇಹ ಬಳಗದಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮೈಸೂರಿನ ಅಭಿವೃದ್ಧಿಗೆ ಸಮರ್ಥ ನಾಯಕತ್ವದ ಅಗತ್ಯವಿದೆ. ಯತೀಂದ್ರ ಅವರಲ್ಲಿ ಆ ಸಾಮಥ್ರ್ಯವಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಚಾಮರಾಜ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಮತದಾರರು ಎಷ್ಟು ಸಹಕರಿಸಿದ್ದಾರೋ ಅಷ್ಟೇ ಸಹಕಾರ ಯತೀಂದ್ರ ಅವರು ನೀಡಿದ್ದಾರೆ. ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಸ್ಪರ್ಧಾಕಾಂಕ್ಷೆಗೆ ಭರವಸೆಯಾಗಿದ್ದರು ಎಂದು ತಿಳಿಸಿದರು.
ಅಭಿನಂದನೆ ಸ್ವೀಕರಿಸಿದ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಮೈಸೂರು ನಮ್ಮ ರಾಜ್ಯದ ಹೆಮ್ಮೆಯ ಸಾಂಸ್ಕøತಿಕ ನಗರಿ, ಪ್ರವಾಸೋದ್ಯಮದ ತಾಣ.ಇಲ್ಲಿನ ಸಮಸ್ಯೆಗಳ ನಿವಾರಣೆಯೇ ನನ್ನ ಮೊದಲ ಆದ್ಯತೆಯಾಗಿದೆ. ಇನ್ನೂ ಹರೀಶ್‍ಗೌಡ ಅವರು ಕೋವಿಡ್ ಸಂದರ್ಭದಲ್ಲಿ ಶಾಸಕರಿಗಿಂತಲೂ ಹೆಚ್ಚಿನ ಕೆಲಸ ನಿರ್ವಹಿಸಿದ್ದರು. ಈಗ ಸ್ವತಃ ಶಾಸಕರಾಗಿ ಹೆಚ್ಚಿನ ಜನಸೇವೆ ಮಾಡುವ ವಿಶ್ವಾಸವಿದೆ ಎಂದರು.
ಚಿಂತಕ ಡಾ.ಕೆ.ಕಾಳಚನ್ನೇಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯವು ಮತ್ತು ನಗರದ ಸರ್ಕಾರಿ ಶಾಲಾ ಕಾಲೇಜುಗಳು ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ. ಅತಿಥಿ ಉಪನ್ಯಾಸಕರ ನೇಮಕಾತಿ ಮತ್ತು ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಯನ್ನು ವಿಳಂಬ ಮಾಡುವುದು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಗತಿಗೆ ಮಾರಕವಾಗಿದೆ. ಈ ಕುರಿತು ಸರ್ಕಾರ ಗಮನಹರಿಸಲಿ ಎಂದರು.
ಶಾಸಕ ಕೆ.ಹರೀಶ್ ಗೌಡ ಮತ್ತು ಮುಖಂಡ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರಿನ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಸುಧಾರಿಸಲು ಕ್ರಮವಹಿಸಬೇಕು. ಪ್ರತಿ ಶಾಸಕರು ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ ವ್ಯವಸ್ಥೆಗಳ ಸುಧಾರಿಸಬೇಕು. ಗ್ಯಾರಂಟಿ ಯೋಜನೆ ಲಾಭ ಪಡೆಯಲು ಜನರು ಕಚೇರಿಗಳ ಮುಂದೆ, ಜೆರಾಕ್ಸ್ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅವರ ಗೊಂದಲ ಹಾಗೂ ಸಮಯ ಉಳಿಸಲು ಪಕ್ಷದ ಸ್ವಯಂಸೇವಕರ ಸೇವೆ ಒದಗಿಸಿ ಅನುಷ್ಠಾನ ಸುಲಭಗೊಳಿಸಿ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ, ಶಾಸಕ ಕೆ.ಹರೀಶ್ ಗೌಡ ಅವರಿಗೆ ಬೆಳ್ಳಿ ಕಿರೀಟವನ್ನು ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಯತಿಂದ್ರ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಟಿ.ಸತೀಶ್ ಜವರೇಗೌಡ, ಜೆ.ಪಿ.ಎನ್. ಪ್ರಾಪರ್ಟೀಸ್ ಡೆವಲಪರ್ ಪಿ.ನಾಗೇಂದ್ರ, ವೈಷ್ಣವಿ ಸ್ವೀಟ್ಸ್ ಮಾಲೀಕ ಜಿ.ನವೀನ್, ಕನ್ನಡ ಸ್ನೇಹ ಬಳಗದ ಅಧ್ಯಕ್ಷ ಪಿ.ಬಂದಿಗೌಡ, ಪ್ರಮುಖರಾದ ರಮೇಶ್, ರಾಜಕುಮಾರ್, ಸಿ.ಬಾಲಚಂದ್ರ, ಆರ್.ರಮೇಶ್, ಪುಟ್ಟೇಗೌಡ ಡಿ.ಬಾಲು, ಡಿ.ಲೋಕೇಶ್, ಎಸ್.ಮಾದಪ್ಪ, ಪೈಲ್ವಾನ್ ಎನ್.ಮಹದೇವು ಇದ್ದರು.