ಯಡ್ರಾಮಿಯನ್ನು ಕಗ್ಗತ್ತಲೆಯಲ್ಲಿ ಮುಳುಗಿಸಿದ ಅಧಿಕಾರಿಗಳುಕಣ್ಮುಚ್ಚಿ ಕುಳಿತ ಪ.ಪಂ. ಅಧಿಕಾರಿಗಳು

ಯಡ್ರಾಮಿ:ಸೆ.10: ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ಇಲ್ಲಿನ ಜನರು ಕತ್ತಲಲ್ಲಿ ಭಯದಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಈ ನಗರದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕಾರಣ ರಾತ್ರಿಯೂ ಈ ರಸ್ತೆಯಲ್ಲಿ ವಾಹನಗಳು, ಸಾರ್ವಜನಿಕರ ಓಡಾಟ ಇದ್ದೇ ಇರುತ್ತದೆ. ಆದರೆ ರಾತ್ರಿ ವೇಳೆ ಹೆದ್ದಾರಿ ಮೇಲೆ ಸರ್ದಾರ್ ಶರಣಗೌಡ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದ ವರೆಗಿನ ಸರಿಯಾಗಿ ಬೀದಿ ದೀಪಗಳು ಉರಿಯುತ್ತಿಲ್ಲ. ರಾಜ್ಯ ಹೆದ್ದಾರಿ ಮೇಲೆ ದಾರಿ ದೀಪಗಳು ಊರಿಯುತ್ತಿಲ್ಲ ಅಂದ್ರೆ ಇನ್ನೂ ವಾರ್ಡ್ ಗಳ ಪರಿಸ್ಥಿತಿ ಹೇಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸೂರ್ಯ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆ ಯಡ್ರಾಮಿ ನಗರದ ಬಹುತೇಕ ಬಡಾವಣೆಗಳು ಕೂಡ ಕತ್ತಲಲ್ಲಿ ಮುಳುಗುತ್ತವೆ. ಮತ್ತೆ ಮರುದಿನ ಸೂರ್ಯ ಉದಯಿಸಿದಾಗಲೇ ಈ ಬಡಾವಣೆಗಳಿಗೆ ಬೆಳಕು ಹರಿಯುವುದು. ಅಲ್ಲಿಯವರೆಗೂ ಕತ್ತಲಕೂಪದಲ್ಲಿ ನರಳಬೇಕು.

ಹಲವು ತಿಂಗಳುಗಳಿಂದ ಯಡ್ರಾಮಿ ನಗರದಲ್ಲಿ ಬೀದಿ ದೀಪಗಳು ಕೆಟ್ಟುನಿಂತಿರುವ ಪರಿಣಾಮ ನಗರ ಕಗ್ಗತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿಯಾದರೆ, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗೆ ಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿನ ಪಟ್ಟಣ ವ್ಯಾಪ್ತಿಯಲ್ಲಿ 11 ವಾರ್ಡ್‍ಗಳಿವೆ ಪ್ರತಿ ವಾರ್ಡ್‍ನ ಬೀದಿಯಲ್ಲೂ ವಿದ್ಯುತ್ ಕಂಬಗಳಿವೆ. ಅವುಗಳಲ್ಲಿ ದೀಪಗಳೂ ಇವೆ. ಆದರೆ ಯಾವುದೇ ಭಾಗಕ್ಕೆ ಹೋದರೂ ಕೆಟ್ಟುನಿಂತಿರುವ ಬೆಳಕು ನೀಡದ ಬೀದಿ ದೀಪಗಳನ್ನು ಕಾಣಬಹುದು. ಕತ್ತಲಾಗುತ್ತಿದ್ದಂತೆ ಪಟ್ಟಣದ ಬಹುತೇಕ ಭಾಗದಲ್ಲಿ ಮನೆ, ಅಂಗಡಿಗಳಲ್ಲಿ ಅಳವಡಿಸಿಕೊಂಡಿರುವ ದೀಪಗಳಿಂದ ಬರುವ ಬೆಳಕಿನಲ್ಲೆ ಜನರ ಸಂಚಾರ, ವ್ಯವಹಾರ ನಡೆಯುವ ಸ್ಥಿತಿ ಇದೆ.ಅಷ್ಟರಮಟ್ಟಿಗೆ ಬೀದಿದೀಪಗಳ ಸಮಸ್ಯೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ರಾತ್ರಿಯಾದರೆ ಬೀದಿ ದೀಪಗಳು ಉರಿಯದ ಕಾರಣದಿಂದ ಬೀದಿಯಲ್ಲಿ ಹಿಂಡಾಗಿ ತಿರುಗುವ ನಾಯಿ, ಗಿಡಗಂಟಿ ಬೆಳೆದಿರುವ ಕಡೆಯಲ್ಲಿ ಹಾವುಗಳ ಕಾಟ ಮುಂತಾದ ಸಮಸ್ಯೆಗಳ ನಡುವೆ ಓಡಾಡುವುದು ಕಷ್ಟವಾಗುತ್ತಿದೆ. ರಾತ್ರಿ ವೇಳೆ ಯಾರೇ ಓಡಾಡಿದರೂ ಅನುಮಾನದಿಂದ ನೋಡುವಂತಾಗಿದೆ. ಹಲವು ತಿಂಗಳಿಂದ ಹೆದ್ದಾರಿ ಮೇಲೆ ದೀಪಗಳೂ ಉರಿಯುತ್ತಿಲ್ಲ. ಕೆಲ ಕಂಬಗಳಲ್ಲಿ ದೀಪಗಳೇ ಇಲ್ಲ.

ಕೆಲ ವಾರ್ಡ್‍ಗಳಲ್ಲಿ ಮಳೆಗಾಲದಲ್ಲಿ ಬಿದ್ದಿರುವ ಗುಂಡಿಗಳು ಕತ್ತಲೆಯಲ್ಲಿ ಕಾಣದೆ, ಓಡಾಟ ದುಸ್ತರವಾಗಿದೆ. ಅಲ್ಲದೆ ಹಲವು ಅಪಾಯಗಳಿಗೂ ಕಾರಣವಾಗುತ್ತಿದೆ. ಕಳ್ಳರಿಗೆ ಕಳವು ಮಾಡಲು ಉಪಯುಕ್ತವಾಗಿ ಪರಿಣಮಿಸಿದೆ. ಈ ಬಗ್ಗೆ ಪ. ಪಂ. ಮುಖ್ಯಾಧಿಕಾರಿ, ಹಾಗೂ ಮಾನ್ಯ ತಹಸೀಲ್ದಾರ್ ರರು ಒಮ್ಮೆಯೂ ಪಟ್ಟಣದ ಜನರ ಸಮಸ್ಯೆ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿಲ್ಲ. ಪಟ್ಟಣದಲ್ಲಿ ಸಂಚರಿಸಿ, ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ತಕ್ಷಣ ಕ್ರಮ ಕೈಗೊಂಡು ಎಲ್ಲಾ ವಾರ್ಡ್‍ಗಳಲ್ಲಿ ಮತ್ತು ಹೆದ್ದಾರಿ ಮೇಲೆ ಸಮರ್ಪಕವಾಗಿ ದೀಪಗಳು ಉರಿಯುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.