ಯಡಿಯೂರು ಶ್ರೀಸಿದ್ಧಲಿಂಗೇಶ್ವರರ ಪುರಾಣ ಇಂದಿನಿಂದ: ಫೆ.3 ರಂದು ಪೂಜ್ಯರ ಪಟ್ಟಾಧಿಕಾರ

ವಾಡಿ:ಜ.12: ಸುಕ್ಷೇತ್ರ ರಾವೂರ ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಶ್ರೀಸಿದ್ಧಲಿಂಗ ದೇವರ ಪಟ್ಟಾಧಿಕಾರ ಮಹೋತ್ಸವ ಫೆ.3 ರಂದು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದರು.

ಈ ಕುರಿತು ಮಂಗಳವಾರ ರಾವೂರ ಮಠದಲ್ಲಿ ಏಪ್ಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಗರೆಡ್ಡಿ ಪಾಟೀಲ, ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ನಾಡಿನಾಧ್ಯಂತ ಶ್ರೀಮಠದ ಕೀರ್ತಿ ಹಬ್ಬಿಸಿದ್ದ ಹಿಂದಿನ ಪೂಜ್ಯ ಶ್ರೀಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗೈಕ್ಯರಾದ ಬಳಿಕ ಮಠದಲ್ಲಿ ನೀರವ ಮೌನ ಆವರಿಸಿತ್ತು. ಇದೇ ಸಂದರ್ಬದಲ್ಲಿ ಮಠದ ಭಕ್ತರ ಕೋರಿಕೆಯಂತೆ ಮಠಕ್ಕೆ ಉತ್ತರಾಧಿಕಾರಿಯಾಗಿ ಆಗಮಿಸಿರುವ ಶ್ರೀಸಿದ್ಧಲಿಂಗ ದೇವರು, ಕಳೆದ ಎರಡು ವರ್ಷಗಳ ಅವದಿಯಲ್ಲಿ ಗ್ರಾಮದ ಭಕ್ತರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಬೃಹತ ಜ್ಯೋತಿ ಯಾತ್ರೆಯಲ್ಲಿ 600ಕ್ಕೂ ಅಧಿಕ ಭಕ್ತರು ಭಾಗಿಯಾಗಲಿದ್ದಾರೆ ಎಂದರು.

ಜ್ಞಾನ ದಾಸೋಹ ಮತ್ತು ಅನ್ನ ದಾಸೋಹವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರು ಸಿದ್ಧಲಿಂಗೇಶ್ವರ ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಆತ್ಮವಿಶ್ವಾಸ ನಮಗಿದೆ. ಹೀಗಾಗಿ ಫೆ.3 ರಂದು ಪೂಜ್ಯರ ನಿರಂಜನ ಪಟ್ಟಾಧಿಕಾರ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲು ನಿರ್ಧರಿಸಿದ್ದೇವೆ ಎಂದರು.

30 ಗ್ರಾಮಗಳಿಗೆ ತೆರಳಿದಾಗ ಭಕ್ತರು ನಿಶ್ಚಲ ಮನಸ್ಸಿನಿಂದ ಸ್ವಾಗತಿಸಿ ಸಹಾಯ ಸಹಕಾರ ನೀಡಿ ಸ್ಪೂರ್ತಿ ತುಂಬಿದ್ದಾರೆ. ಸಮಸ್ಯೆಗಳನ್ನು ಸರಿಪಡಿಸಿಕೊಂಡು ಸಾಮರಸ್ಯ ಮೂಡಿಸುವ ಮೂಲಕ ಮಠದ ಕಾರ್ಯಗಳನ್ನು ಮುನ್ನಡೆಸಲಾಗುವುದು. ರಾವೂರ ಮಠದ ಕೆಳಗೆ 16 ಶಾಖಾ ಮಠಗಳಿವೆ. ಅವುಗಳ ಜೀರ್ಣೋದ್ಧಾರದ ಜತೆಗೆ ಶ್ರೀಮಠದಿಂದ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಚಿಂತನೆಯಿದೆ. ಇದಕ್ಕೂ ಮೊದಲು ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠ ಬೆಳೆದು ಬಂದ ದಾರಿಯ ಕುರಿತು ಸಂಶೋಧನಾ ಕೃತಿ ಬಿಡುಗಡೆ ಮಾಡುವ ಚಿಂತನೆಯಿದೆ. ಮಠವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಕೊಂಡೊಯ್ದು ಬಸವದಿ ಶರಣ ಚಿಂತನೆಗಳನ್ನು ಹರಡುತ್ತೇವೆ. ಭಕ್ತರಲ್ಲಿ ತುಂಬಿರುವ ಮೌಢ್ಯ, ಅಂಧಶ್ರದ್ಧೆ, ಕಂದಾಚಾರಗಳನ್ನು ತೊಡೆದುಹಾಕಲು ಪ್ರಯತ್ನಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ವಿವಿಧ ಕ್ಷೇತ್ರದಗಳ ಶಾಸಕರು ಹಾಗೂ 25ಕ್ಕೂ ಹೆಚ್ಚು ಮಠಾದೀಶರು, ಲಕ್ಷಾಂತರ ಜನ ಭಕ್ತರು ಪಾಲ್ಗೊಳ್ಳುವರು ಎಂದು ಪಟ್ಟಾಧಿಕಾರ ಮಹೋತ್ಸವದ ಪ್ರಮುಖರು ಭಾಗಿಯಾಗಲಿದ್ದಾರೆ.

ಪಟ್ಟಾಧಿಕರ ಮಹೋತ್ಸವದ ಅಧ್ಯಕ್ಷ ಶಿವಲಿಂಗಪ್ಪ ವಾಡೇದ, ಗೌರವಾಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕಾರ್ಯಾಧ್ಯಕ್ಷ ಶ್ರೀನಿವಾಸ ಸಗರ, ಮುಖಂಡರಾದ ಅಬ್ದುಲ್ ಅಜೀಜ್ ಸೇಠ, ಶಿವಾನಂದ ಪಾಟೀಲ ಮರತೂರ, ಚೆನ್ನಣ್ಣ ಬಾಳಿ, ಡಾ.ಗುಂಡಣ್ಣ ಬಾಳಿ, ಭೀಮಾಶಂಕರ ಖೇಣಿ, ಮಾಣಿಕ ಪಾಟೀಲ ಗೋಳಾ, ಶರಣಗೌಡ ಪಾಟೀಲ ಚಾಮನೂರ, ಆಣ್ಣಾರಾವ ಬಾಳಿ, ಸೂರ್ಯಕಾಂತ ಕಾಳೇಕರ, ಸಿದ್ದಲಿಂಗ ಬಾಳಿ ಸುದ್ದಿಗೋಷ್ಠಿಯಲ್ಲಿ ಇದ್ದರು.