ಯಡಿಯೂರಪ್ಪ ಯಾರದ್ದೋ ಕಾಲು ಹಿಡಿದು ಮುಖ್ಯಮಂತ್ರಿಯಾಗಿಲ್ಲ: ಕಟೀಲ್

ಮಂಗಳೂರು, ಮೇ ೩೧- ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇಲ್ಲ. ನಮ್ಮ ಸರ್ವ ಸಮ್ಮತಿಯ ನಾಯಕ ಬಿ.ಎಸ್.ಯಡಿಯೂರಪ್ಪ. ಸುದೀರ್ಘ ಹೋರಾಟದ ಮೂಲಕ ಯಡಿಯೂರಪ್ಪ ಈಗ ಅತಿ ಎತ್ತರದ ಸ್ಥಾನಕ್ಕೆ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಹೇಳಿಕೆಗೆ ನಳಿನ್ ಈ ಮೂಲಕ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಮಾತನಾಡಿದ ಸಂಸದ ನಳೀನ್ ಅವರು,  ಯಡಿಯೂರಪ್ಪ ಪಕ್ಷಾಂತರ ಮಾಡಿ, ಯಾರದ್ದೋ ಕಾಲು ಹಿಡಿದು ಮುಖ್ಯಮಂತ್ರಿಯಾಗಿಲ್ಲ. ಸಿದ್ದರಾಮಯ್ಯನವರು ಯೋಚಿಸಬೇಕಿತ್ತು. ಅವರು ಮುಂಚೆ ಎಲ್ಲಿದ್ರು, ಯಾರು ಅವರ ಗುರು ಆಗಿದ್ರು, ಕಾಂಗ್ರೆಸ್ ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಅವತ್ತು ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ರಾಹುಲ್ ಗಾಂಧಿಯವರು ಕುಮಾರಸ್ವಾಮಿ ಕೈಕಾಲು ಹಿಡಿದು ಮುಖ್ಯಮಂತ್ರಿ ಮಾಡಿದ್ದರು. ಅಂದರೆ ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕ ಇಲ್ಲ ಅಂತಾ ಸೋನಿಯಾ ಗಾಂಧಿ ತೀರ್ಮಾನ ಅಲ್ವಾ ಅದು ? ಸಿದ್ದರಾಮಯ್ಯ ಅವರ ಪಕ್ಷವನ್ನು ಮೊದಲು ನೋಡುವುದು ಒಳ್ಳೆಯದು ಎಂದರು. ಸೋನಿಯಾ ಗಾಂಧಿಯವರಿಗೆ ಗೊತ್ತಿದೆ, ಸಿದ್ದರಾಮಯ್ಯ ಸಮರ್ಥ ನಾಯಕ ಅಲ್ಲ. ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕರಿಲ್ಲ ಎಂದು ಗೊತ್ತಾಗಿ ಕುಮಾರಸ್ವಾಮಿಯನ್ನು ಅವತ್ತು ಮುಖ್ಯಮಂತ್ರಿ ಮಾಡಿದ್ದು ಎಂದು ನಳಿನ್ ಹೇಳಿದರು.