ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ: ಬಂಜಾರಾ ಸಮಾಜದ ಪರವಾಗಿ ಕ್ಷಮೆ ಕೇಳಿದ ಸಂಸದ ಡಾ. ಜಾಧವ್

ಕಲಬುರಗಿ,ಮಾ.30: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಸಾಮಾಜಿಕ ನ್ಯಾಯ ಒದಗಿಸುವ ರೀತಿಯಲ್ಲಿ ಹಂಚಿಕೆ ಮಾಡಿದ್ದಾರೆ. ಆದಾಗ್ಯೂ, ಬಂಜಾರಾ ಸಮುದಾಯದವನ್ನು ಎಸ್‍ಸಿ ಪಟ್ಟಿಯಿಂದ ಹೊರ ಹಾಕಲಾಗುತ್ತದೆ ಎಂಬ ತಪ್ಪು ತಿಳುವಳಿಕೆಯನ್ನು ನೀಡಿದ್ದರಿಂದ ಸಮಾಜದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ನಾನು ಕ್ಷಮೆ ಕೇಳುವುದಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರ ನೇತೃತ್ವದಲ್ಲಿನ ಸರ್ಕಾರವು ಒಳ್ಳೆಯ ನಿರ್ಧಾರವನ್ನು ಕೈಗೊಂಡಿದೆ. ಆದಾಗ್ಯೂ, ಮಾಜಿ ಮುಖ್ಯಮಂತ್ರಿಗಳ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಬಂಜಾರಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಬಂಜಾರಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ಬಂಜಾರಾ ಭವನಗಳನ್ನು ನಿರ್ಮಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಾರು 17 ಜನರಿಗೆ ಟಿಕೆಟ್ ಕೊಟ್ಟಿದ್ದು, ಅವರಲ್ಲಿ ಸಮಾಜದ 11 ಜನರು ಆಯ್ಕೆಯಾಗಿ ಶಾಸಕರಾಗಿದ್ದಾರೆ. ನಾನೂ ಸಹ ಯಡಿಯೂರಪ್ಪ ಅವರ ಆಶೀರ್ವಾದದಿಂದಲೇ ಆಯ್ಕೆಯಾಗಿದ್ದೇನೆ. ಸಮಾಜ ಕಲ್ಯಾಣ ಮಾಡುವಂತಹ ಕಾರ್ಯಗಳನ್ನು ಮಾಡಿದರೂ ಸಹ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದರ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿಯಿಂದಾಗಿ ಬಂಜಾರಾ ಸಮುದಾಯಕ್ಕೆ ಒಟ್ಟು ಮೂರು ರೀತಿಯ ಲಾಭ ಆಗಲಿದೆ. ಮೊದಲನೇಯದಾಗಿ ಸಮಾಜವು ಎಸ್ಸಿ ಪಟ್ಟಿಯಲ್ಲಿಯೇ ಮುಂದುವರೆಯಲಿದೆ. ಇಲ್ಲಿಯವರೆಗೆ ಇದ್ದ ಮೀಸಲಾತಿ ಪ್ರಮಾಣವು ಶೇಕಡಾ 4.5ಕ್ಕೆ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.
ಒಳ ಮೀಸಲಾತಿಯು ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಅದನ್ನು ರಾಜ್ಯ ಸರ್ಕಾರವು ನಿವಾರಣೆ ಮಾಡಿದೆ. ಕಾಂಗ್ರೆಸ್ಸಿನವರು ಕೇವಲ ಅಧಿಕಾರಕ್ಕಾಗಿ ಸಮಾಜಕ್ಕೆ ತಪ್ಪು ತಿಳುವಳಿಕೆ ಕೊಡುತ್ತಿದ್ದಾರೆ. ಒಳ ಮೀಸಲಾತಿಯನ್ನು ಒಪ್ಪುತ್ತಾರೋ ಅಥವಾ ತಿರಸ್ಕರಿಸುತ್ತಾರೋ ಎನ್ನುವುದರ ಕುರಿತು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಒಳ ಮೀಸಲಾತಿಯನ್ನು ಎ.ಜೆ. ಸದಾಶಿವ್ ಆಯೋಗದ ವರದಿಯಂತೆ ಮಾಡಿಲ್ಲ. ಹೀಗಾಗಿ ಸದಾಶಿವ್ ಆಯೋಗದ ವರದಿ ಜಾರಿಯಾಗಿಲ್ಲ ಎಂದು ಹೇಳಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿನ ಸಚಿವರಾದ ಗೋವಿಂದ್ ಕಾರಜೋಳ್, ಪ್ರಭು ಚವ್ಹಾಣ್, ಎಸ್. ಅಂಗಾರ್, ಡಿ. ಸುಧಾಕರ್ ಅವರನ್ನು ಒಳಗೊಂಡ ಉಪ ಸಮಿತಿಯು ಒಳ ಮೀಸಲಾತಿಯನ್ನು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಹಂಚಿಕೆ ಮಾಡಿದ್ದಾರೆ. ಇದು ಎಲ್ಲ ಸಮಾಜದವರು ಒಗ್ಗೂಡಿ ಹೋಗುವಂತಹ ಮೀಸಲಾತಿಯಾಗಿದೆ. ಹಾಗಾಗಿ ಯಾರೂ ಸಹ ಪ್ರತಿಭಟನೆ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಈಗಾಗಲೇ ಈ ಕುರಿತು ಸಮಾಜ ಬಾಂಧವರಿಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಲಾಗಿದೆ. ಆದಾಗ್ಯೂ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಆ ಕುರಿತು ನಾವು ಜಾಗೃತಿ ಮೂಡಿಸುವುದಕ್ಕೆ ತೊಂದರೆ ಆಗಿದೆ. ಮಾಧ್ಯಮಗಳು ಆ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದ ಅವರು, ನನ್ನ ಮನೆಯ ಮುಂದೆ ಬಂಜಾರಾ ಸಮುದಾಯವರು ಪ್ರತಿಭಟನೆ ಮಾಡಬಾರದು ಎಂದು ಕೋರಿದರು.
ಇನ್ನು ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕವನ್ನು ಮೊದಲಿನಿಂದಲೂ ನಿರ್ಲಕ್ಷಿಸುತ್ತಿತ್ತು. ಉದ್ಯೋಗಗಳನ್ನು ಸೃಷ್ಟಿ ಮಾಡಿರಲಿಲ್ಲ. ನಾನು ಸಂಸದನಾಗಿ ಬಂದ ಮೇಲೆ ಮೂರು ವರ್ಷಗಳ ಕಾಲ ಕೋವಿಡ್ ಭೀತಿಯಿಂದಾಗಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳಲು ಆಗಲಿಲ್ಲ. ಈಗ ನಗರದ ಬಳಿ ಹತ್ತು ಸಾವಿರ ಕೋಟಿ ರೂ.ಗಳ ಬಂಡವಾಳದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಿಂದಾಗಿ ನೇರವಾಗಿ ಒಂದು ಲಕ್ಷ ಜನರಿಗೆ ಹಾಗೂ ಪರೋಕ್ಷವಾಗಿ ಎರಡು ಲಕ್ಷ ಜನರಿಗೆ, ಒಟ್ಟು ಮೂರು ಲಕ್ಷ ಉದ್ಯೋಗಗಳು ದೊರಕಲಿವೆ ಎಂದು ಡಾ. ಉಮೇಶ್ ಜಾಧವ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಠಲ್ ಜಾಧವ್, ನಾಮದೇವ್ ರಾಠೋಡ್ ಕರಹರಿ, ಕಮಲಾಕರ್ ರಾಠೋಡ್, ಈಶ್ವರ್ ನಾಯಕ್, ಅರವಿಂದ್ ಚವ್ಹಾಣ್ ಮುಂತಾದವರು ಉಪಸ್ಥಿತರಿದ್ದರು.