ಯಡಿಯೂರಪ್ಪ ಬಿಟ್ಟರೆ ಬೇರೆ ಯಾರಿಂದಲೂ ಮೀಸಲು ನೀಡಲು ಅಸಾಧ್ಯ: ಜಯಮೃತ್ಯುಂಜಯ ಸ್ವಾಮೀಜಿ

ಕಲಬುರಗಿ:ಡಿ.29:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿಯೇ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯಸ್ವಾಮೀಜಿ ಅವರು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆಗೊಳಿಸಲು ಹೋರಾಟ ಪ್ರಖರಗೊಳಿಸುವುದಾಗಿ ಎಚ್ಚರಿಸಿದರು.
ಪಂಚಮಸಾಲಿ ಸಮುದಾಯವನ್ನು ರಾಜ್ಯ ಮಟ್ಟದಲ್ಲಿ 2ಎಗೆ ಸೇರ್ಪಡೆಗೊಳಿಸಲು ಆಗ್ರಹಿಸಿದ್ದೇವೆ. ನಮ್ಮ ಸಮುದಾಯದಿಂದ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ್ದೇವೆ. ಆದಾಗ್ಯೂ, ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಲಾಗಿದ್ದು, ನಮ್ಮ ಮಕ್ಕಳಿಗೆ ಮೀಸಲಾತಿ ಸಿಗಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.
ಪಂಚಮಸಾಲಿ ಸಮುದಾಯವನ್ನು ಓಬಿಸಿಯಲ್ಲಿ ಸೇರ್ಪಡೆ ಮಾಡಿದರೆ ನಮಗೆ ಮೊದಲ ಜಯ ಸಿಕ್ಕ ಹಾಗೆಯೇ. ಈ ಕೆಲಸ ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಅವರ ಅವಧಿಯಲ್ಲಿಯೇ ಈ ಕೆಲಸ ಆಗಬೇಕು ಎಂದು ಅವರು ಹೇಳಿದರು.