ಯಡಿಯೂರಪ್ಪ ಟಿಶ್ಯೂ ಪೇಪರ್

ಬೆಂಗಳೂರು, ಏ. ೧೧- ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಡೆಯನ್ನು ರಾಜ್ಯ ಕಾಂಗ್ರೆಸ್ ಖಂಡಿಸಿದೆ.
ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಕೇಂದ್ರ ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಯಡಿಯೂರಪ್ಪರವರನ್ನು ಕಾಗದದಂತೆ ಬಳಸಿ ಬಿಸಾಡಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕೇಂದ್ರ ಬಿಜೆಪಿ ನಾಯಕರ ನಡೆಯನ್ನು ವಿರೋಧಿಸಿದೆ.
ರಾಜ್ಯದ ಅತಿದೊಡ್ಡ ಲಿಂಗಾಯಿತ ಸಮುದಾಯ ನಾಯಕನನ್ನೇ ಹೊರಗಿಟ್ಟು ರಾಜ್ಯ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಗೆ ಸಭೆ ನಡೆಸಲಾಗಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ರಾಜ್ಯ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ನೀಡಿಲ್ಲ. ಈ ಮೂಲಕ ಯಡಿಯೂರಪ್ಪ ಅವರನ್ನು ಟಿಶ್ಯೂ ಪೇಪರ್ ನಂತೆ ಬಳಸಿ ಬಿಸಾಡಲಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.