ಯಡಿಯೂರಪ್ಪ ಕರ್ನಾಟಕದ ಮೋದಿ – ಮಾಜಿ ಸಚಿವ  ಶ್ರೀರಾಮುಲು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.2 :-ದೇಶದಲ್ಲಿ ಅನೇಕ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳ ಮೂಲಕ ದೇಶದ ಆರ್ಥಿಕ ಪ್ರಗತಿಯನ್ನು ಉಳಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯಂತೆ ಕರ್ನಾಟಕದಲ್ಲಿ ಬಿಜೆಪಿಯ ಯಡಿಯೂರಪ್ಪ  ನೇತೃತ್ವದಲ್ಲಿ ಈ ಹಿಂದೆ  ಅಧಿಕಾರ ನಡೆಸುತ್ತಿದ್ದಾಗ  ಅವರ ಆಡಳಿತ ಅವಧಿಯಲ್ಲಿ ಅವರು ಜಾರಿಗೆ ತಂದ ಅನೇಕ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಜನತೆ ಎಂದು ಮರೆಯಲಾರರು ಅಲ್ಲದೆ ದೇಶಕ್ಕೆ ಮೋದಿ ಎಷ್ಟು ಪ್ರಮುಖರೋ  ರಾಜ್ಯಕ್ಕೆ ಯಡಿಯೂರಪ್ಪ ಸಹ ಅಷ್ಟೇ ಮುಖ್ಯವಾಗಿದ್ದಾರೆ ಅವರು ಕರ್ನಾಟಕದ ಮೋದಿ ಎಂದರೆ ತಪ್ಪಾಗದು ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು.
ಅವರು ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯದಲ್ಲಿ   ಶುಕ್ರವಾರ ಆಯೋಜಿಸಿದ್ದ ಔತಣಕೂಟ ಹಾಗೂ ಬಿಜೆಪಿ ತಾಲೂಕು‌ ಮಟ್ಟದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ 10 ವರ್ಷಗಳ ಆಡಳಿತಾವಧಿಯಲ್ಲಿ ಉಜ್ವಲ, ಕಿಸಾನ್ ಸಮ್ಮಾನ್ ಸೇರಿ ನಾನಾ ಯೋಜನೆಗಳನ್ನು ಜಾರಿಗೊಳಿಸಿರುವುದು ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಉತ್ತಮ ಆಡಳಿತಗಾರರಾದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರಲ್ಲದೆ, ಚಿತ್ರದುರ್ಗ – ಹೊಸಪೇಟೆ,  ಬಳ್ಳಾರಿ -ಹಿರಿಯೂರು ಸೇರಿ ನಾನಾ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಒತ್ತು ನೀಡಿ ಅಭಿವೃದ್ಧಿ ಪಡಿಸಿರುವುದನ್ನು ಯಾರೂ ಮರೆಯುವಂತಿಲ್ಲ    ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತ ಹಾಗೂ ಉತ್ತಮ ಆರ್ಥಿಕ ನೀತಿಯ ಫಲವಾಗಿ ಪ್ರಸ್ತುತ ದೇಶವು ಆರ್ಥಿಕ ಪ್ರಗತಿಯಲ್ಲಿ 3ನೇ ಸ್ಥಾನದಲ್ಲಿದ್ದು, ಮತ್ತೊಮ್ಮೆ ಮೋದಿಯವರು ಪ್ರಧಾನಿಯಾದರೆ ದೇಶವು ಆರ್ಥಿಕತೆಯಲ್ಲಿ ನಂ.1 ಸ್ಥಾನದಲ್ಲಿ ಇರುವುದು ಖಚಿತ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಯಡಿಯೂರಪ್ಪ, ವಿಜಯೇಂದ್ರ ಕೃಷ್ಣಾರ್ಜುನರು :
ಮುಂಬರುವ ಲೋಕಸಭಾ ಚುನಾವಣೆ ಸಮರಕ್ಕೆ  ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಸನ್ನದ್ದವಾಗಿದ್ದು  ಸಮರಕ್ಕೆ ಕರ್ನಾಟಕದಲ್ಲಿ ವಿಜಯೇಂದ್ರ ಅರ್ಜುನನಂತೆ ಚುನಾವಣಾ ತಂತ್ರಗಾರಿಕೆಯ ಅಸ್ತ್ರಗಳನ್ನು ಹಿಡಿದುಕೊಂಡಿದ್ದರೆ ಅದಕ್ಕೆ ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕೃಷ್ಣ  ಸಾರಥ್ಯ ನೀಡಿದಂತೆ ವಿಜಯೇಂದ್ರ ನೆಂಬ ಅರ್ಜುನನಿಗೆ ಶ್ರೀಕೃಷ್ಣ ನಾಗಿ ಯಡಿಯೂರಪ್ಪ ಸಾರಥ್ಯ ವಹಿಸಲಿದ್ದಾರೆ ಅಲ್ಲದೆ ರಾಜ್ಯದ 28ಕ್ಕೆ 28ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು  ಶ್ರೀರಾಮುಲು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಪಾಟೀಲ್, ಕೂಡ್ಲಿಗಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕಾಮಶೆಟ್ಟಿ ನಾಗರಾಜ, ಮುಖಂಡರಾದ ರಾಮದುರ್ಗ ಸೂರ್ಯಪಾಪಣ್ಣ, ಗುಂಡುಮುಣುಗು ಎಸ್.ಪಿ.ಪ್ರಕಾಶ್, ಮೊರಬ ಶಿವಣ್ಣ, ಕೂಡ್ಲಿಗಿ ಬಿ.ಭೀಮೇಶ್, ಎಚ್.ರೇವಣ್ಣ, ಗುಳಿಗಿ ವೀರೇಂದ್ರ, ರೇಖಾ ಮಲ್ಲಿಕಾರ್ಜುನ, ಹುಲಿಕೆರೆ ಗೀತಾ, ಕೋಲಮ್ಮನಹಳ್ಳಿ ಭೀಮಣ್ಣ, ಕೆ.ಚನ್ನಪ್ಪ, ಕೊಲುಮೆಹಟ್ಟಿ ವೆಂಕಟೇಶ್, ಯಜಮಾನಪ್ಪ, ಸೂಲದಹಳ್ಳಿ ಮಾರೇಶ್ ಸೇರಿ ಇತರರು  ಭಾಗವಹಿಸಿದ್ದರು.
ಕೂಡ್ಲಿಗಿ ಬಿಜೆಪಿ ಭದ್ರಕೋಟೆ :  2000ನೇ ಇಸ್ವಿಯಿಂದ ಕೂಡ್ಲಿಗಿ ಕ್ಷೇತ್ರದ ಒಡನಾಟವಿದ್ದು
ಪ್ರತಿ ಚುನಾವಣೆಯಲ್ಲೂ ಕೂಡ್ಲಿಗಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಅತಿಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿ ಕಳುಹಿಸುವ ಮೂಲಕ ಕೂಡ್ಲಿಗಿ ಕ್ಷೇತ್ರ ಬಿಜೆಪಿಯ  ಭದ್ರಕೋಟೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳ ಲಭಿಸಬೇಕಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದ್ದು, ದೇಶದಲ್ಲಿ ಬಿಜೆಪಿ 370 ಸೇರಿ ಎನ್ ಡಿಎ ಮೈತ್ರಿಕೂಟದಿಂದ 400 ಹೆಚ್ಚು  ಸೀಟುಗಳು ಗೆಲ್ಲಲಿವೆ ಎಂಬುದನ್ನು ಸ್ವತಃ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ಶತಃಸಿದ್ಧ ಎಂದು ಭವಿಷ್ಯ ನುಡಿದರು.