ಯಡಿಯೂರಪ್ಪ-ಈಶ್ವರಪ್ಪ ನಡುವೆ ಭಿನ್ನಮತ : ಇದೇ ಮೊದಲಲ್ಲ, ಕೊನೆಯೂ ಅಲ್ಲ..!

ಶಿವಮೊಗ್ಗ, ಏ.1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪರ ನಡುವೆ, ಕಳೆದ ಹಲವು ತಿಂಗಳುಗಳಿಂದ ನಡೆದುಕೊಂಡು ಬರುತ್ತಿದ್ದ ‘ಶೀತಲ ಸಮರ’ ಕೊನೆಗೂ ಬಹಿರಂಗವಾಗಿದೆ! ಇದು ಇಬ್ಬರ ನಾಯಕರ ತವರೂರು, ಶಿವಮೊಗ್ಗ ಬಿಜೆಪಿ ಪಾಳೇಯದಲ್ಲಿ ಬಿಸಿ ಬಿಸಿ ಚಚರ್ೆಗೆಡೆ ಮಾಡಿಕೊಟ್ಟಿದೆ.

ತಮ್ಮ ಇಲಾಖೆಯಲ್ಲಿ ಬಿ.ಎಸ್.ವೈ. ಹಸ್ತಕ್ಷೇಪ ನಡೆಸುತ್ತಿದ್ದಾರೆ. ತಮ್ಮ ಗಮನಕ್ಕೆ ಬರದೆ, ಬೇಕಾದವರಿಗೆ ಅನುದಾನ ಮಂಜೂರುಗೊಳಿಸುತ್ತಿದ್ದಾರೆ. ಈ ಸಂಬಂಧ ಕೆ.ಎಸ್.ಇ. ರವರು, ರಾಜ್ಯಪಾಲರು ಹಾಗೂ ಪಕ್ಷದ ವರಿಷ್ಠರಿಗೆ ಬಿ.ಎಸ್.ವೈ. ವಿರುದ್ದ ದೂರು ನೀಡಿದ್ದಾರೆ. ಇದು ಇಬ್ಬರ ನಡುವಿನ ವೈಮನಸ್ಸು ತಾರಕಕ್ಕೇರುವಂತೆ ಮಾಡಿದೆ.

ಇದೇ ಮೊದಲಲ್ಲ: ಬಿಜೆಪಿ ಪಕ್ಷದಲ್ಲಿ ಬಿ.ಎಸ್.ವೈ. – ಕೆ.ಎಸ್.ಇ. ಜೋಡಿಯನ್ನು, ರಾಮ-ಲಕ್ಷ್ಮಣರಿಗೆ ಹೋಲಿಸಲಾಗುತ್ತಿತ್ತು. ಆ ಮಟ್ಟಕ್ಕೆ ಅವರ ನಡುವೆ ಗಳಸ್ಯ ಕಂಠಸ್ಯವಿತ್ತು. ಉತ್ತಮ ಬಾಂಧವ್ಯವಿತ್ತು. 2009 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ನಂತರ, ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಲಾರಂಭಿಸಿತು.

2009 ರಲ್ಲಿ ಬಿ.ವೈ.ರಾಘವೇಂದ್ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಇದು ಹೆಮ್ಮರವಾಗಿ ಬೆಳೆಯಿತು. ಕೆ.ಎಸ್.ಇ. ಪ್ರತಿನಿಧಿಸುವ ಶಿವಮೊಗ್ಗ ವಿಧಾಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರಗೆ ಕಡಿಮೆ ಮತ ಬಂದಿದ್ದಕ್ಕೆ, ಬಿ.ಎಸ್.ವೈ. ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕೆ.ಎಸ್.ಇ. ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.

ತದನಂತರ ಇಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇ ಹೋಯಿತು. ಹಲವು ಬಾರಿ ಇದು ವಿಕೋಪಕ್ಕೆ ತಲುಪಿತ್ತು. ಬಿ.ಎಸ್.ವೈ. ಬಿಜೆಪಿ ತೊರೆದು ಕೆಜೆಪಿ ಪಕ್ಷ ಸ್ಥಾಪಿಸಿದ್ದ ವೇಳೆ, ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕೆ.ಎಸ್.ಇ. ಸೋಲಿಸುವ ಶಪಥ ಮಾಡಿದ್ದರು. ಅದರಂತೆ ಕೆ.ಎಸ್.ಇ.ಗೆ ಸೋಲಿನ ರುಚಿ ತೋರಿಸಿದ್ದರು.

ಬಿ.ಎಸ್.ವೈ. ಮರಳಿ ಬಿಜೆಪಿ ಸೇರ್ಪಡೆಯಾಗಿ, ಆ ಪಕ್ಷದ ರಾಜ್ಯಾಧ್ಯಕ್ಷರಾದಾಗ ಅವರ ಕಾರ್ಯವೈಖರಿ ವಿರುದ್ದ ಕೆ.ಎಸ್.ಇ. ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ರಚಿಸಿದ್ದರು. ಅವರ ವಿರುದ್ದ ಬಹಿರಂಗ ಸಮರ ಸಾರಿದ್ದರು. ಪಕ್ಷದ ವರಿಷ್ಠರಿಗೆ ಪರಸ್ಪರ ದೂರು-ಪ್ರತಿದೂರು ನೀಡುವುದು ನಡೆದುಕೊಂಡು ಬಂದಿತ್ತು.

ಮತ್ತೆ ಮುನಿಸು: ಇತ್ತೀಚೆಗೆ ಒಬ್ಬರು ಮತ್ತೊಬ್ಬರ ಮುಖ ನೋಡದ ಮಟ್ಟಕ್ಕೆ, ಇಬ್ಬರ ನಡುವೆ ವೈಮನಸ್ಸು ಆವರಿಸಿತ್ತು. ಶಿವಮೊಗ್ಗದಲ್ಲಿ ತಮ್ಮ ಪ್ರಭಾವ ನಗಣ್ಯವಾಗುತ್ತಿರುವುದು, ಬಿ.ಎಸ್.ವೈ. ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಿಡಿತ ಹೆಚ್ಚಾಗುತ್ತಿರುವುದು ಕೂಡ ಕೆ.ಎಸ್.ಇ. ಮುನಿಸಿಗೆ ಕಾರಣವಾಗಿತ್ತು. 

ಈ ಕಾರಣದಿಂದಲೇ ತವರೂರಲ್ಲಿ ಬಿ.ಎಸ್.ವೈ. ಭಾಗವಹಿಸುತ್ತಿದ್ದ ಹಲವು ಕಾರ್ಯಕ್ರಮಗಳಿಗೆ ಗೈರು ಹಾಜರಾಗಿದ್ದರು. ಇದೀಗ ಪಂಚಾಯತ್ ರಾಜ್ ಇಲಾಖೆಯಲ್ಲಿ ಬಿ.ಎಸ್.ವೈ. ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಕೆ.ಎಸ್.ಇ. ಸಮರಕ್ಕಿಳಿದಿದ್ದಾರೆ. ಮುಂದೇನಾಗಲಿದೆ ಎಂಬುವುದು ಕಾದು ನೋಡಬೇಕಾಗಿದೆ.

ಒಟ್ಟಾರೆ ಬಿ.ಎಸ್.ವೈ-ಕೆ.ಎಸ್.ಇ. ನಡುವಿನ ವೈಮನಸ್ಸು ಇದೇ ಮೊದಲಲ್ಲ, ಕೊನೆಯೂ ಅಲ್ಲವೆಂದು ಬಿಜೆಪಿ ಪಾಳೇಯದಲ್ಲಿ ಮಾತನಾಡಿಕೊಳ್ಳುತ್ತಿರುವುದಂತೂ ಸತ್ಯವಾಗಿದೆ!

ರಾಜೀನಾಮೆ ಎಚ್ಚರಿಕೆ?!

*** ತಮ್ಮ ಇಲಾಖೆಯಲ್ಲಿ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ಹಸ್ತಕ್ಷೇಪಕ್ಕೆ ಕಡಿವಾಣ ಹಾಕದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.ಎಸ್.ಈಶ್ವರಪ್ಪರವರು, ಬಿಜೆಪಿ ಪಕ್ಷದ ವರಿಷ್ಠರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ತವರೂರು ಶಿವಮೊಗ್ಗ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ರಾಜೀನಾಮೆ ಪ್ರಸ್ತಾಪವನ್ನು ಕೆ.ಎಸ್.ಈಶ್ವರಪ್ಪ ಮಾಡಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.