ಯಕ್ಷ ರಂಗದ ಬೆಳವಣಿಗೆಗೆ ಸುಶಿಕ್ಷಿತರ ಕೊಡುಗೆ ಅಪಾರ : ಚೆನ್ನೂರ ಪ್ರೇಕ್ಷಕರ ನಡುವೆ ಎದ್ದು ಬಂದ “ಶಿವದೂತ ಪಂಜುರ್ಲಿ”ಗೆ ನಮಿಸಿದ ಯಕ್ಷ ರಸಿಕರು

ಕಲಬುರಗಿ,ಆ.7:ಯಕ್ಷಗಾನ ಪ್ರದರ್ಶನದ ವೇಳೆ ಪಂಜುರ್ಲಿ ದೈವ ಪ್ರೇಕ್ಷಕರ ನಡುವೆ
ಆವೇಶಭರಿತವಾಗಿ ಪ್ರತ್ಯಕ್ಷಗೊಂಡಾಗ ಮಂತ್ರಮುಗ್ಧರಾದ ಯಕ್ಷ ರಸಿಕರು ತಲೆಬಾಗಿ ನಮಿಸುವ ದೃಶ್ಯ ಯಕ್ಷ ಕಲೆಯ ಭವ್ಯತೆಯನ್ನು ಅನಾವರಣಗೊಳಿಸಿತು.
ಕಲ್ಬುರ್ಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಆಗಸ್ಟ 6 ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಂದಾರ್ತಿ ನಡೂರಿನ ಶ್ರೀ ಮಹಾ ಗಣತಿ ಪ್ರವಾಸಿ ಯಕ್ಷಗಾನ ಮಂಡಳಿಯ ತಂಡವು ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಲ್ಬುರ್ಗಿ ಹಾಗೂ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಗಳ ಮಾಲೀಕರ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ “ಶಿವದೂತ ಪಂಜುರ್ಲಿ” ಯಕ್ಷಗಾನ ಪ್ರದರ್ಶನ ವೇಳೆ ದೀವಟಿಗೆ (ಬೆಂಕಿಯ ದೊಂದಿ) ಗಳನ್ನು ಹಿಡಿದು ಜಗಮಗಿಸುವ ಬೆಳಕಿನ ಚಿತ್ತಾರದ ಮಧ್ಯೆ ಘರ್ಜನೆಯೊಂದಿಗೆ ಸಭಾ ಮಂಟಪವನ್ನು ಪ್ರೇಕ್ಷಕರ ನಡುವಿನಿಂದ ಎದ್ದು ಪ್ರವೇಶಿಸುವುದರ ಮೂಲಕ ಯಕ್ಷ ರಸಿಕರು ಮಂತ್ರಮುಗ್ಧರಾಗದರು. ತಲೆಬಾಗಿ ಕೈಮುಗಿದು ವಂದಿಸುತ್ತ ಭಾವ ಪುಳಕಿತರಾದರು.
ಅದ್ಭುತವಾದ ಮುಖವರ್ಣಿಕೆ , ತೆಂಗಿನ ಗರಿಗಳನ್ನು ಹೋಲುವ ಶೃಂಗರಿಸಿದ ಅಣಿ ಮತ್ತು ಅರ್ದಾಲ ,(ಮುಖವರ್ಣಿಕೆ) ಗಳಿಂದ ವಿಶಿಷ್ಟ ಯಕ್ಷರಂಗದ ಪೋಷಾಕಿನೊಂದಿಗೆ ಘರ್ಜಿಸುತ್ತ, ದೀವಟಿಗೆಗಳನ್ನು (ಬೆಂಕಿ ದೊಂದಿ) ಬೀಸುತ್ತ ಪಂಜುರ್ಲಿ ರಂಗಸ್ಥಳ ಪ್ರವೇಶ ಮಾಡಿದ ಅಬ್ಬರದ ಯಕ್ಷಗಾನ ರಸಿಕರ ಕಣ್ಮನ ಸೆಳೆಯಿತು ಹಾಗೂ ಯಕ್ಷರಂಗದ ಕಲಾವಿದನ ಅದ್ಭುತ ಪ್ರತಿಭೆ ಅನಾವರಣಗೊಂಡಿತು.
ಕಾಂತರಾ ಸಿನಿಮಾದಿಂದ ಪ್ರಖ್ಯಾತಿ ಹೊಂದಿದ ಕರಾವಳಿಯ ದೈವ ಪಂಜುರ್ಲಿ ಶಿವಾಂಶ ಸಂಭೂತನಾಗಿದ್ದು ಅನ್ಯಾಯದ ವಿರುದ್ಧ ಸಿಡಿದೆದ್ದು ಶಿಕ್ಷೆ ವಿಧಿಸುವ ಸುಂದರ ‘ಶಿವದೂತ ಪಂಜುರ್ಲಿ’ ಯಕ್ಷಗಾನ ಪ್ರದರ್ಶನ ಕಲಬುರ್ಗಿಯ ಯಕ್ಷಗಾನ ರಸಿಕರಲ್ಲಿ ಅಚ್ಚಳಿಯದ ರಸದೌತಣವನ್ನು ನೀಡಿರುವುದು ವಿಶೇಷ . ಯಕ್ಷಗಾನ ರಂಗದಲ್ಲಿ ಪರಂಪರೆಯ ಮತ್ತು ಧಾರ್ಮಿಕ ಭಾವನೆಗಳನ್ನು ಹೆಣೆದು ಕೊಡುವ ಮತ್ತು ಸಚ್ಚಾರಿತ್ರ್ಯದ ಬದುಕಿಗೆ ನಾಂದಿ ಹಾಡುವ ಅಪೂರ್ವ ಸಂದೇಶ ಸಾರುವ ಯಕ್ಷಗಾನ ಪ್ರಸಂಗಗಳಿಂದ ಜನರ ಬದುಕು ಧರ್ಮಯುತವಾಗಿ ಮತ್ತು ನೈತಿಕತೆಯಿಂದ ಕೂಡಿ ಸುಸ್ಥಿರ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದನ್ನು ಈ ಪ್ರದರ್ಶನವು ಸಾಬೀತುಪಡಿಸಿದೆ. ಕಥೆಯ ಉದ್ದಕ್ಕೂ ಅಪೂರ್ವವಾದ ಸಂದೇಶ ಸಾರುವ ಸಂಭಾಷಣೆ ಹಾಗೂ ಭಾವಗೀತೆಗಳನ್ನು ಯಕ್ಷಗಾನದ ಪದ್ಯಗಳಾಗಿ ಬಳಸಿ ಕವಿಗಳಿಗೆ ಧ್ವನಿಯಾಗಿ ಗಾನ ಮತ್ತು ನೃತ್ಯದಿಂದ ರಸಿಕರನ್ನು ಮುಟ್ಟಿರುವುದು ವಿಶೇಷವಾಗಿದೆ. ಕಲ್ಬುರ್ಗಿಯಲ್ಲಿ ಪಂಜುರ್ಲಿ ದೈವದ ಪ್ರತಾಪವನ್ನು ನೋಡಿ ಯಕ್ಷ ರಸಿಕರಲ್ಲಿ ಭಕ್ತಿ ಭಾವದ ಸಿಂಚನ ಮೂಡಿದ್ದು ವಿಶೇಷ.

“ಸುಶಿಕ್ಷಿತ ರಿಂದ ಯಕ್ಷಗಾನದ ಬೆಳವಣಿಗೆ”

  ಕರಾವಳಿಯ ಯಕ್ಷಗಾನವನ್ನು ಸಾಹಿ ತಿಗಳಾದ. ಡಾ. ಶಿವರಾಮ ಕಾರಂತರಾದಿಯಾಗಿ ಸಾಹಿತಿಗಳು ತಜ್ಞರು ವೈದ್ಯರು ಇಂಜಿನಿಯರ್ ಗಳು ಹಾಗೂ ಅನ್ಯಾಯ ಕ್ಷೇತ್ರಗಳಲ್ಲಿರುವ ಗಣ್ಯರು ಕಾಲಿಗೆ ಗೆಜ್ಜೆ ಕಟ್ಟುವುದರ ಮೂಲಕ ಬೆಳೆಸಿದರ ಪರಿಣಾಮವಾಗಿ ಇಂದು ಜಗತ್ತಿನ ಅತ್ಯಂತ ಶ್ರೇಷ್ಠ ಕಲಾ ಪ್ರಕಾರವಾಗಿ ಬೆಳೆದು ನಿಂತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್ ಚನ್ನೂರು ಅವರು ಯಕ್ಷಗಾನ ಪ್ರದರ್ಶನವನ್ನು ಚಂಡೆ ವಾದನ ಮಾಡುವುದರ ಮೂಲಕ ಉದ್ಘಾಟಿಸಿ ನುಡಿದರು.
  ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ದೊಡ್ಡಾಟ, ಸಣ್ಣಾಟ, ಬಯಲಾಟ, ರಾಧಾನಾಟ ಮುತಾದ ಕಲಾ ಪ್ರಕಾರಗಳು ಸೀಮಿತ ಕಲಾವಿದರ ಕೈಯಲ್ಲಿ ಮಾತ್ರ ಬೆಳೆದಿರುವುದರಿಂದ ಯಕ್ಷಗಾನದಂತೆ ವ್ಯಾಪಕವಾದ ಜನಪ್ರಿಯತೆ ಮತ್ತು ಪ್ರಚಾರವನ್ನು ಪಡಯಲಾಗದೆ ಸೊರಗಿದೆ. ಈ ಬಗ್ಗೆ ಎಲ್ಲರೂ ಚಿಂತನೆ ಹರಿಸಬೇಕಾಗಿದೆ ಎಂದು ಹೇಳಿದರು. 
  ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘವು ಕರಾವಳಿ ಮತ್ತು ಕಲ್ಯಾಣ ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಸೆಯುವ ಕೆಲಸವನ್ನು ಮಾಡಿದೆ. ಆ ಮೂಲಕ ಕಲೆಯ ಬೆಳವಣಿಗೆ ಮತ್ತು ವಿಸ್ತರಣೆಗೆ ದೊಡ್ಡ ಕೊಡುಗೆ ನೀಡಲಾಗುತ್ತಿದೆ ಹಾಗೂ ಇಲ್ಲಿನ ಕಲಾ ಪ್ರಕಾರಗಳನ್ನು ಕೂಡ ಆ ನಿಟ್ಟಿನಲ್ಲಿ ಎತ್ತರಕ್ಕೆ ಒಯ್ಯುವಲ್ಲಿ ಎಲ್ಲರೂ ಕೂಡ.ಸಾಂಸ್ಕೃತಿಕವಾಗಿ ಚಿಂತನೆ ಮಾಡಿ ಬೆಳೆಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲೆ ಅಧ್ಯಕ್ಷರಾದ ವಿಜಯಕುಮಾರ ತೇಗಲ ತಿಪ್ಪಿ ಹೇಳಿದರು. 
ಯಕ್ಷಗಾನ ಮೇಳದ ವ್ಯವಸ್ಥಾಪಕರು ಹಾಗೂ ಭಾಗವತರಾದ ಸದಾಶಿವ ಅಮೀನ್ ಅವರು ಮಾತನಾಡಿ ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಮುಂಬೈ, ತೆಲಂಗಾಣ ಕರ್ನಾಟಕ ಮುಂತಾದಡೆಗಳಲ್ಲಿ ಒಟ್ಟು 75 ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಲು ಈ ವರ್ಷ ಅವಕಾಶ ಲಭಿಸಿರುವುದು ಸಂಸ್ಕೃತಿ ಪೋಷಕರ ಆಸಕ್ತಿ ಮತ್ತು ಬೆಂಬಲಕ್ಕೆ ಸಾಕ್ಷಿಯಾಗಿದೆ. ಕಲಬುರ್ಗಿಯಲ್ಲಿ 'ಶಿವದೂತ ಪಂಜುರ್ಲಿ' ಪ್ರದರ್ಶನ ನೀಡಲು 

ದ .ಕ.ಸಂಘ ಅನುವು ಮಾಡಿ ಕೊಟ್ಟಿರುವುದಕ್ಕೆ ಅಭಿನಂದಿಸುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸೂಗಣ್ಣ ಆವಂಟಿ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ದಕ್ಷಿಣ ಕನ್ನಡ ಸಂಘದ ಗೌರವ್ಯಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನ ಉಪಸ್ಥಿತರಿದ್ದರು ಕಾರ್ಯಕ್ರಮದ ಸಂಯೋಜಕ ರಲ್ಲೊಬ್ಬರಾದ ಉದ್ಯಮಿ ಜೀವನ್ ಕುಮಾರ್ ಜತ್ತನ್ ಭಾಗವತರಾದ ಸದಾಶಿವ ಅಮೀನ್ ಅವರಿಗೆ ಮೈಸೂರು ಪೇಟ, ಶಾಲು ಹಾಗೂ ಯಕ್ಷಗಾನದ ಕಿರೀಟದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಸಾಂಸ್ಕೃತಿಕ ಅಭಿ ಯಾನ ಮತ್ತು ಸಮಾಜ ಸೇವ ಕಾರ್ಯಗಳನ್ನು ವಿವರಿಸಿದರು. ಸಂಘದ ಕಾರ್ಯದರ್ಶಿ ಪುರಂದರ ಭಟ್ ನಿರೂಪಣೆ ಮಾಡಿದರು ಕು. ಸುದೀಪ್ತ ಭಟ್ ಪ್ರಾರ್ಥನಾ ಗೀತೆ ಹಾಡಿದರು. ರತ್ನಾಕರ ರಾವ್ ಧನ್ಯವಾದ ವಿತ್ತರು. ಕಾರ್ಯಕ್ರಮದಲ್ಲಿ ಸ್ವಾಮಿ ರಾವ್, ಕುಲಕರ್ಣಿ ಪುಂಡಲಿಕ ನಾಯಕ್, ಎಸ್ ಎಸ್ ಗುಬ್ಬಿ, ಶರಣು ಪಪ್ಪಾ, ಉಮೇಶ್ ಶೆಟ್ಟಿ, ಡಾ ಚಿ. ಸಿ ನಿಂಗಣ್ಣ, ಜಾನಕಿ ದೇಶಪಾಂಡೆ, ಕೆ.ಪಿ ಗಿರಿಧರ್, ಮೋಹನ ಸೀತ ನೂರು ಮಾನಯ್ಯ ನಾಗಣ್ಣ ಬಡಿಗೇರ್ ರಾಜಕುಮಾರ್ ಗುತ್ತೇದಾರ್ ಉಪೇಂದ್ರ ಗುತ್ತೇದಾರ್ ರಾಜೇಶ್ ದತ್ತು ಗುತ್ತೇದಾರ್ ಅಂಬಯ್ಯ ಗುತ್ತೇದಾರ್ ಅಶೋಕ್ ಸನ್ನತಿ ಸುರೇಶ್ ಗುತ್ತೇದಾರ್ ಮಟ್ಟೂರ, ಸತ್ಯನಾಥ ಶೆಟ್ಟಿ, ಸುದರ್ಶನ್ ಜತ್ತನ್ ,ಜಯಕುಮಾರ್ ಕೊಕ್ಕರ್ಣೆ, ಪ್ರಭಾಕರ ಉಪಾಧ್ಯಾಯ, ಮಹಾಕೀರ್ತಿ ಶೆಟ್ಟಿ, ನರಸಿಂಹ ಮೆಂಡನ್,ಸತ್ಯಾನಂದ ಮೂಡಬಿದಿರೆ, ಸುನಿಲ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರಾಮಕೃಷ್ಣ ಕೆದಿಲಾಯ , ಗಿರಿಧರ ಭಟ್, ಮುರಳಿ ಭಟ್, ಪದ್ಮನಾಭ ಭಟ್, ಸಂತೋಷ್ ಪೂಜಾರಿ, ಲಕ್ಷ್ಮಿ ಪ್ರಶಾಂತ್ ಪೈ, ಅರುಣಾಚಲ ಭಟ್ ಎಂ.ಎನ್.ಎಸ್ ಶಾಸ್ತ್ರಿ, ಸವಿತಾ ಗುತ್ತೇದಾರ್, ಜಯಾ ಪ್ರವೀಣ್ ಜತ್ತನ್, ಶಶಿಕಲಾ ಶಾಸ್ತ್ರಿ, ಪ್ರಮೀಳಾ ಪೆರ್ಲ,ವಾಣಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಕಥಾನಕಕ್ಕೆ ಜೀವ ತುಂಬಿದರು:

  .ಯಕ್ಷಗಾನ ರಸವೈಭವದಲ್ಲಿ ಭಾಗವತರಾಗಿ ಕೊಕ್ಕರ್ಣೆ ಸದಾಶಿವ ಅಮೀನ್ ಮತ್ತು ಗಣೇಶ ಆಚಾರ್ಯ ಬಿಲಾಡಿ ಮದಲೆಯಲ್ಲಿ ಲೋಹಿತ್ ಕೋಮಿ ಚೆಂಡೆಯಲ್ಲಿ ಕೊಕ್ಕರ್ಣೆ, ಯಶವೀರನಾಗಿ ಉಪ್ಪುಂದ ನಾಗೇಂದ್ರರಾವ್ ಸಾರಂಗ ಪಾತ್ರದಲ್ಲಿ ಹೆಣ್ಣಾಬಯಲು ವಿಶ್ವನಾಥ ಪೂಜಾರಿ ಪಾತ್ರದಲ್ಲಿ ಹರಿಶ್ಚಂದ್ರ ಜಪ್ತಿ ಪಂಜುರ್ಲಿ ದೈವವಾಗಿ ನಂದೀಶ್ ಕುಮಾರ್ ಜನ್ನಾಡಿ ಈಶ್ವರನ ಪಾತ್ರದಲ್ಲಿ ಕೇಶವಾಚಾರ್ಯ ಶೃಂಗೇರಿ,ಸಾವೇರಿಯಾಗಿ ದಿನಕರ ಕುಂದರ್ ನಡೂರ್ , ರಾಗಿಣಿಯಾಗಿ ನಾಗರಾಜ್ ಪೂಜಾರಿ ದೇವಲಕುಂದ,ಪಾರ್ವತಿ ಯಾಗಿ ರಾಕೇಶ್ ಶೆಟ್ಟಿ ಮೇಗರವಳ್ಳಿ, ಬೀರಪ್ಪನ ಪಾತ್ರದಲ್ಲಿ ಸತೀಶ್ ಕುಮಾರ್ ಹಾಲಾಡಿ ಯಕ್ಷಪ್ರಿಯರನ್ನು ರಂಜಿಸಿದರು.

ಇಂತಹ ಅದ್ಭುತ ಯಕ್ಷಗಾನ ಪ್ರದರ್ಶನವನ್ನು ಸಾದರಪಡಿಸಿದ ಕಲಾವಿದರಿಗೆ ಹ್ಯಾಟ್ಸಾಫ್ ಅನ್ನಲೇಬೇಕು. ಕಾಂತಾರ ಸಿನಿಮಾದಂತೆ ಯಕ್ಷಗಾನದ ಪಂಜುರ್ಲಿ ಜನರನ್ನು ಮೋಹಗೊಳಿಸಿದೆ
…..ಡಾ. ಸ್ವಾಮಿ ರಾವ್ ಕುಲಕರ್ಣಿ

  ಪಂಜುರ್ಲಿ ದೈವದ ಮುಖವಾಣಿಕೆ ಪೋಷಕು ಕಲಾವಿದರ ದೃತ್ಯ ಗಾನ ವೈಭವ ಎಲ್ಲವೂ ಯಕ್ಷರಸಿಕರಿಗೆ ರಸದೌತಣ ನೀಡಿದೆ.

……ಮೋಹನ್ ಸೀತನೂರು, ಖ್ಯಾತ ಕಲಾವಿದರು .

  ನಿತ್ಯದ ಜಂಜಡ ಬದುಕಿನ ಲೋಕದಿಂದ ಬೇರೊಂದು ಲೋಕಕ್ಕೆ ಕರೆದೊಯ್ಯುವ ಮತ್ತು ಸನ್ಮಾರ್ಗಕ್ಕೆ ಕರೆತರುವ ಶಕ್ತಿ ಜಾನಪದ ಕಲೆಗಳಿಗಿದೆ .ಈ ಯಕ್ಷಗಾನ ಕಾರ್ಯಕ್ರಮ ನೋಡಿ ರೋಮಾಂಚನಗೊಂಡ ಪ್ರೇಕ್ಷಕರಿಗೆ ಇದು ಮನದಟ್ಟಾಗಿದೆ. ಅಪಾರಪ್ರೇಕ್ಷಕರ ಸಂಖ್ಯೆ ಹೊಂದಿದ ಪ್ರದರ್ಸ್ ನೋಡಿ ಸಂತೋಷ ಹಾಗೂ ರೋಮಾಂಚಕಾರಿ ಅನುಭವವಾಗಿದೆ ಮತ್ತು ಧನ್ಯತಾ ಭಾವ ಮೂಡಿದೆ

….ಡಾ.ಮಾನಯ್ಯ ನಾಗಣ್ಣ ಬಡಿಗೇರ ಶಿಲ್ಪಿ.