ಯಕ್ಷಗಾನದ ವೇಳೆ ಕುಸಿದು ಕಲಾವಿದ ಸಾವು

ಉಡುಪಿ, ಜ. ೫- ರಂಗಸ್ಥಳದಲ್ಲಿ ಯಕ್ಷಗಾನದ ಪದ್ಯಕ್ಕೆ ಕುಣಿಯುತ್ತಿರುವ ಸಂದರ್ಭದಲ್ಲಿಯೇ ಕಲಾವಿದನೋರ್ವ ಹೃದಯಾಘಾತದಿಂದ ಕುಸಿದುಬಿದ್ದು, ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮಂದಾರ್ತಿ ದುರ್ಗಾಪರಮೇಶ್ವರಿ ಮೇಳದ ಪ್ರದಾನ ವೇಷಧಾರಿ ಸಾದು ಕೊಠಾರಿ (೫೮) ಹೃದಯಾಘಾತದಿಂದ ರಂಗಸ್ಥಳದಲ್ಲೇ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಶಿರಿಯಾರದ ಕಾರ್ಜೆಲ್ಲಿ ಸಮೀಪದ ಕಲ್ಪೆಟ್ಟು ಗ್ರಾಮದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಯಕ್ಷಗಾನ ಮೇಳದ ಪ್ರದಾನ ವೇಷಧಾರಿ ಪಾತ್ರ ನಿರ್ವಹಿಸುತ್ತಿದ್ದು, ಕೊಠಾರಿ ಅವರು ಇಂದು ಬೆಳಗಿನ ಜಾವ ೩ ಗಂಟೆಯ ಸಮಯದಲ್ಲಿ ”ಮಹಾಕಲಿ ಮಗದೇಂದ್ರ’ಪ್ರಸಂಗದಲ್ಲಿ ಮಾಘದನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ರಂಗ ಮಂಟಪದಲ್ಲೇ ಎದೆನೋವಿನಿಂದ ತೀವ್ರವಾಗಿ ಅಸ್ವಸ್ತಗೊಂಡರು. ಅನಂತರ ತಕ್ಷಣ ಅವರು ಧರಿಸಿದ್ದ ವೇಷ ಕಳಚಿ, ಮೇಳದ ಪ್ರದಾನ ಭಾಗವತ ಸದಾಶಿವ ಅಮಿನ್ ಹಾಗೂ ಮೇಳದ ಮ್ಯಾನೇಜರ್ ಮತ್ತು ಸಹ ಕಲಾವಿದರು, ಸ್ಥಳೀಯರು ಜೊತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.ಆದರೆ ದುರಾದೃಷ್ಷವಷಾತ್ ಅವರು ಆಸ್ಪತ್ರೆ ಸೇರುವಷ್ಟರಲ್ಲೇ ಜವರಾಯನ ಪಾದ ಸೇರಿದ್ದರು.
ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಕೊಠಾರಿ ಅವರು, ಬಡ ಗುತ್ತಿಟ್ಟಿನ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡು ಸುಮಾರು ೪೦ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ಮಾಡುತ್ತಿದ್ದರು. ಹಲವಾರು ಯಕ್ಷಗಾನ ಮೇಳದ ಕಲಾವಿದರು, ವಿವಿಧ ಸಂಘಟನೆಗಳು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.