ಮ.ಮ.ಹಳ್ಳಿ ಹೋಬಳಿಯ ಗ್ರಾ.ಪಂಗಳ ಚುನಾವಣಾ ಫಲಿತಾಂಶ

ಮರಿಯಮ್ಮನಹಳ್ಳಿ, ಡಿ.31: ಮರಿಯಮ್ಮನಹಳ್ಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಗ್ರಾ.ಪಂ. ಚುನಾವಣೆ ಫಲಿತಾಂಶಗಳು ನಿನ್ನೆ ಹೊರಬಿದ್ದಿದ್ದು, ವಿಜೇತರು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ನಾಲ್ಕು ಗ್ರಾ.ಪಂ.ಗಳಲ್ಲಿ ಈ ಬಾರಿ ಪ್ರಭಾವಿಗಳು ಹಾಗೂ ಬಹುತೇಕ ಯುವಕರು ಸ್ಪರ್ಧಿಸಿದ್ದು ವಿಶೇಷವಾಗಿತ್ತು.
ಈ ಬಾರಿ ಎಲ್ಲಾ ರಾಜಕೀಯ ವಿಶ್ಲೇಷಕರ ಕಣ್ಣು ಹೊಸತಾಗಿ ಡಣನಾಯಕನಕೆರೆ ಗ್ರಾ.ಪಂಗೆ ಸೇರ್ಪಡೆಯಾದ ಇಂದಿರಾನಗರದ ಕಡೆಗೆ ಇದ್ದು, ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ಮೂವರು ಅಭ್ಯರ್ಥಿಗಳ ಆಯ್ಕೆಯ ಲೆಕ್ಕಾಚಾರ ನಡೆದಿತ್ತು. ಆದರೆ ಇಂದಿರಾನಗರದ ಸಮಾಜ ಸೇವಕ ಪಿ. ಸೋಮಪ್ಪ ಹಾಗೂ ಅವರ ಪತ್ನಿ ಅಕ್ಕಮಹಾದೇವಿ ಹಾಗೂ ಇವರೀರ್ವರ ಜೊತೆ ನಗರದ ಇನ್ನೋರ್ವ ಸಮಾಜ ಸೇವಕ ಎಲ್.ಪ್ರಕಾಶ್‍ರ ಪತ್ನಿ ಎಲ್. ನೇತ್ರರ ಗೆಲುವು ಖಚಿತ ಎನ್ನುವ ಲೆಕ್ಕಾಚಾರಗಳು ನಾಮಪತ್ರ ಸಲ್ಲಿಸಿದ ದಿನದಿಂದಲೂ ನಗರದ ಮತದಾರರ ಒಮ್ಮತದ ಅಭಿಪ್ರಾಯವಾಗಿತ್ತು. ಅದರಂತೆ ನಿನ್ನೆಯ ಫಲಿತಾಂಶದಲ್ಲಿ ಈ ಮೂವರು ಜಯಗಳಿಸಿದ್ದಾರೆ.
ಪತಿ ಪತ್ನಿಯ ಗೆಲುವು: ಇಂದಿರಾನಗರವು ಒಂದು ಕಡೆ ಮರಿಯಮ್ಮನಹಳ್ಳಿ ಪಟ್ಟಣಕ್ಕೂ ಸೇರದೆ ಮತ್ತೊಂದೆಡೆ ಡಣನಾಯಕನಕೆರೆ ಗ್ರಾ.ಪಂ.ಗೂ ಸೇರದೆ ಅತಂತ್ರ ಸ್ಥಿತಿಯಲ್ಲಿತ್ತು. ಪ್ರಸ್ತುತ ವರ್ಷ ಡಣನಾಯಕನಕೆರೆಗೆ ಸೇರ್ಪಡೆಯಾದ ಹಿನ್ನಲೆ ಇದೇ ಮೊದಲ ಬಾರಿ ಗ್ರಾ.ಪಂ. ಚುನಾವಣೆಯನ್ನು ಎದುರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಪತಿ ಪತ್ನಿ ಇಬ್ಬರೂ ನಗರದ ಆಕಾಂಕ್ಷಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ವಾಸ್ತವವಾಗಿ ಕುಟುಂಬದಲ್ಲಿ ಪತ್ನಿ ಅಭ್ಯರ್ಥಿಯಾದರೆ ಪತಿ ಪ್ರಚಾರ ಕಾರ್ಯದಲ್ಲಿ ಇಲ್ಲವೇ ಪತಿ ಅಭ್ಯರ್ಥಿಯಾದರೆ ಪತ್ನಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ವಾಡಿಕೆ. ಆದರೆ ಈ ಬಾರಿ ಇಲ್ಲಿಯ ಮೊದಲ ಗ್ರಾ.ಪಂ. ಚುನಾವಣೆಯಲ್ಲಿ ಪತಿ ಪಿ. ಸೋಮಪ್ಪ ಹಾಗೂ ಪತ್ನಿ ಅಕ್ಕಮಹಾದೇವಿ ಇಬ್ಬರೂ ಸ್ಪರ್ಧಿಸಿ ವಿಜೇತರಾಗಿದ್ದಾರೆ.
ವಿಜೇತ ಅಭ್ಯರ್ಥಿ ಪಿ. ಸೋಮಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಮೊದಲ ಬಾರಿ ಗ್ರಾ.ಪಂ. ಚುನಾವಣೆಗೆ ನಮ್ಮ ಇಂದಿರಾನಗರದ ಮತದಾರ ಪ್ರಭುಗಳು ಸೇವೆ ಮಾಡಲು ಆಶೀರ್ವದಿಸಿದ್ದಾರೆ. ಅದರಂತೆ ನಮ್ಮ ಇಂದಿರಾನಗರದ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ವ್ಯವಸ್ಥೆ, ಬೀದಿ ದೀಪದ ಸಮಸ್ಯೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ ಗ್ರಾಮದ ವಾಸಿಗಳಿಗೆ ಇದುವರೆಗೆ ತಾವು ನೆಲೆಸಿರುವ ಮನೆಗಳಿಗೆ ಭೂಮಿಯ ಪಟ್ಟ ಇರುವುದಿಲ್ಲ. ಅದನ್ನು ಸರ್ಕಾರದಿಂದ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.