
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.16: ಸಮಾಜದ ಎಲ್ಲಾ ವರ್ಗದಲ್ಲಿನ ಬಡ ಹಾಗೂ ದೀನ ದಲಿತರ ಏಳಿಗೆ ಹಾಗೂ ಸಮಾನತೆಯನ್ನು ತರುವುದೇ ನಮ್ಮ ಟ್ರಸ್ಟಿನ ಮುಖ್ಯ ಉದ್ದೇಶ ಎಂದು ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪೀಠ ವಿಜಯನಗರ ಜಿಲ್ಲೆ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಗರಿಬೊಮ್ಮನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಟ್ರಸ್ಟ್ ವತಿಯಿಂದ ಮರಿಯಮ್ಮನಹಳ್ಳಿ ಸರಕಾರಿ ಸಮುದಾಯ ಭವನದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಟ್ರಸ್ಟ್‌ನ ಗೌರವಾಧ್ಯಕ್ಷ ವೀರಣ್ಣ ಮಾತನಾಡಿ, ಜೀವ ಕುಲಕ್ಕೆ ಆಮ್ಲಜನಕ ಅತ್ಯಮೂಲ್ಯ. ಅದನ್ನು ಪಡೆಯಲು ನಾವೆಲ್ಲರೂ ಗಿಡಮರಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುಳಾ, ಟ್ರಸ್ಟಿಗಳಾದ ಟಿ ಪ್ರಭಾಕರ್, ಮೈನಹಳ್ಳಿ ಬಸವರಾಜ್, ಎಲಿಗಾರ್ ದೊಡ್ಡ ಮಂಜಣ್ಣ, ಉರುಕೊಳ್ಳಿ ಮಂಜುನಾಥ, ಬದ್ರಿನಾಥ್ ಶೆಟ್ರು, ಗೋವಿಂದರ ಪರಶುರಾಮ್, ಕೊಟ್ಟಿಗಿ ಲೋಕೇಶ್, ಈಡಿಗರ ಎರಿಸ್ವಾಮಿ, ಶ್ರೀನಿವಾಸ್ ಶೆಟ್ರು, ಎಲಿಗಾರ್ ಸಣ್ಣ ಮಂಜುನಾಥ ಹಾಗೂ ಇತರರು ಇದ್ದರು.