ಮ.ಮ.ಬೆಟ್ಟದಲ್ಲಿ ಅದ್ದೂರಿ ಯುಗಾದಿ ರಥೋತ್ಸವ

ಹನೂರು: ಮಾ.23:- ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಮಲೈಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬುಧವಾರ ಬೆಳಗ್ಗೆ 9.50ರಿಂದ 10.30ರವರೆಗೆ ನಡೆಯುವ ಶುಭ ಲಗ್ನದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರ ಬೆಲ್ಲದ ಆರತಿಯೊಂದಿಗೆ ಪವಾಡ ಪುರುಷ ಮಾದಪ್ಪನ ಮಹಾ ರಥೋತ್ಸವ ನಡೆಯಿತು.
ಇದಕ್ಕೂ ಮುನ್ನ ಸುಮಾರು 1 ಗಂಟೆ ಕಾಲ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ತೇರು ದೇಗುಲದ ಆವರಣದಲ್ಲಿ ಸಂಚರಿಸುತ್ತಿದ್ದಂತೆ ರಥೋತ್ಸವಕ್ಕೆ ಹರಕೆ ಹೊತ್ತ ಭಕ್ತಾದಿಗಳು ತಾವು ತಂದಿದ್ದ ಧವಸ-ಧಾನ್ಯ ಹಾಗೂ ಹಣ್ಣು -ಜವನ ಎಸೆದು ಭಕ್ತಿಯ ಪರಾಕಾಷ್ಠೆ ಮೆರೆದರು.
ಬಳಿಕ ತೇರಿನೊಂದಿಗೆ ಹುಲಿವಾಹನ, ಬಸವವಾಹನ ಉತ್ಸವ ಮೂರ್ತಿಗಳು, ತಾಳ ಮೇಳಗಳೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆಗೆ ಸಂಚರಿಸಲಾಯಿತು.
ಪ್ರತಿ ವರ್ಷದಂತೆ ದೊಡ್ಡತೇರಿಗೆ ಸಂಪೂರ್ಣವಾಗಿ ಹಸಿ ಬಿದಿರು ಬಳಕೆ ಮಾಡಲಾಗಿತ್ತು. ಬಿದಿರು ಹಾಗೂ ಹುರಿಯ ಹಗ್ಗಗಳಿಂದ 72 ಮೊಳ ಎತ್ತರದಲ್ಲಿ ರಥ ಇದ್ದು, 52 ಅಡಿ ತೇರಿನಲ್ಲಿ 4 ಚೌಕೃತ ಪೆಟ್ಟಿಗೆ ನಿರ್ಮಾಣವಾಗಿದೆ. ರಥವನ್ನು ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿದ್ದು, ತಳಿರು ತೋರಣಗಳಿಂದ ರಥ ಕಂಗೊಳಿಸುತ್ತಿತ್ತು.
ರಥೋತ್ಸವ ಸಂದರ್ಭದಲ್ಲಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಳೆದ 3 ದಿನಗಳಿಂದ ಎಣ್ಣೆ ಮಜ್ಜನದೊಂದಿಗೆ ಪ್ರಾರಂಭವಾದ 3 ದಿನಗಳ ಯುಗಾದಿ ಜಾತ್ರಾ ಮಹೋತ್ಸವ ಮಹಾರಥೋತ್ಸವದ ಬಳಿಕ ಜಾತ್ರೆ ಪೂರ್ಣಗೊಂಡಿತು.