
ಚಾಮರಾಜನಗರ, ಮೇ.15:- ಜನಾಶೀರ್ವಾದ ಪಡೆದ ಬಳಿಕ ಭಗವಂತನ ಆಶೀರ್ವಾದ ಪಡೆಯಲು ನೂತನ ಶಾಸಕರು ಕಾಲ್ನಡಿಗೆಯಲ್ಲಿ ದೇವರ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಶಾಸಕರ ಪುತ್ರ ದೇವರಿಗೆ ಮುಡಿ ಕೊಟ್ಟಿದ್ದಾರೆ. ಮತ್ತೊಂದೆಡೆ ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ನೂತನ ಶಾಸಕ, ಎಂ. ಆರ್. ಮಂಜುನಾಥ್ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದೇವರ ದರ್ಶನ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.
ರಾಜ್ಯದ ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತಮ್ಮ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ನಿನ್ನೆ ರಾತ್ರಿ ಹಾಗೂ ಇಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾಸಕನಾಗಿ ಆಯ್ಕೆಯಾದರೇ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ದರ್ಶನ ಪಡೆಯುವುದಾಗಿ ಮಂಜುನಾಥ್ ಹರಕೆ ಹೊತ್ತಿದ್ದರು. ಅದರಂತೆ, ಗೆಲುವು ಸಾಧಿಸಿದ ದಿನವೇ ಬೆಂಬಲಿಗರೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಮುಡಿ ಕೊಟ್ಟ ಶಾಸಕರ ಪುತ್ರ:
ಚಾಮರಾಜನಗರ ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಸಿ. ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಾಸಕರ ಪುತ್ರ ಕುಸುಮರಾಜ್ ದೇವರಿಗೆ ಮುಡಿ ಕೊಟ್ಟಿದ್ದಾರೆ. ಸೋಮಣ್ಣ ಸ್ಪರ್ಧೆ ಬಳಿಕ ಚಾಮರಾಜನಗರ ಹೈ ವೋಲ್ವೇಜ್ ಕ್ಷೇತ್ರವಾಗಿ ಬದಲಾಗಿತ್ತು. ಗೆಲ್ಲುವ ಉಮೇದಿನಲ್ಲಿ ಸೋಮಣ್ಣ ಇದ್ದರು. ಆದರೆ, ಎಲ್ಲಾ ಲೆಕ್ಕಾಚಾರವನ್ನು ಮತದಾರರು ಉಲ್ಟಾ ಮಾಡಿದ್ದು ಪುಟ್ಟರಂಗಶೆಟ್ಟಿ ಅವರಿಗೆ ಅನಾಯಸ ಗೆಲುವನ್ನು ತಂದುಕೊಟ್ಟಿದ್ದಾನೆ. ಇನ್ನು ಹಿರಿತನ, ಉಪ್ಪಾರ ಸಮುದಾಯದ ಏಕೈಕ ಶಾಸಕ ಆಗಿರುವ ಪುಟ್ಟರಂಗಶೆಟ್ಟಿ ಸಚಿವರಾಗುವ ರೇಸ್ ನಲ್ಲೂ ಇದ್ದಾರೆ.