ಮ್ಯಾರಥಾನ್ ಓಟಕ್ಕೆ ಎಸ್‍ಪಿ, ಸಿಇಒ ಚಾಲನೆಚುನಾವಣೆ ಪ್ರಜಾತಂತ್ರ

????????????????????????????????????


ಬಳ್ಳಾರಿ,ಏ.16: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಪ್ರಜಾತಂತ್ರ ಹಬ್ಬಗಳಿದ್ದಂತೆ. ಪ್ರತಿಯೊಬ್ಬರೂ ಭಾಗವಹಿಸಿ ತಪ್ಪದೇ ಮತದಾನ ಮಾಡಬೇಕು ಮತ್ತು ನಿಮ್ಮ ಅಕ್ಕಪಕ್ಕದವರಿಗೂ ಮತದಾನ ಮಾಡುವಂತೆ ತಿಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಹೇಳಿದರು.
ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರಪಾಲಿಕೆ ಇವರ ಸಹಯೋಗದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಪ್ರಮಾಣ ಹೆಚ್ಚಿಸಲು ಭಾನುವಾರದಂದು ನಗರದ ವಿಮ್ಸ್ ಮೈದಾನದಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರರೇ ಪ್ರಭುಗಳು. 18 ವರ್ಷ ತುಂಬಿದ ಅರ್ಹ ಮತದಾರರು ಮೇ 10 ರಂದು ನಡೆಯುವ ಮತದಾನ ದಿನದಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗಿಳಿಯಬಾರದು ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿಯಿಂದ ವಿಶೇಷಚೇತನರಿಂದ ತ್ರಿ-ಚಕ್ರ ವಾಹನ ಜಾಥಾ, ಬೈಕ್ ರ್ಯಾಲಿ, ಮತದಾನ ಪ್ರತಿಜ್ಞೆ ವಿಧಿ ಭೋದನಾ ಕಾರ್ಯಕ್ರಮ ಹಾಗೂ ಪಂಜಿನ ಮೆರವಣಿಗೆ, ಎತ್ತಿನಬಂಡಿ ಮೆರವಣಿಗೆ ಆಯೋಜಿಸಲಾಗಿದೆ.  ಶೇಕಡವಾರು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು ಅವರು ಮಾತನಾಡಿ, ಆರೋಗ್ಯಕರ ಮಾನವನ ಶರೀರಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ, ಅದೇರೀತಿಯಾಗಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾನ ಒಂದು ಪ್ರಮುಖ ಅಸ್ತ್ರವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ತಪ್ಪದೇ ಎಲ್ಲರು ಮತದಾನ ಮಾಡಬೇಕು ಎಂದು ಹೇಳಿದರು.
ಮತದಾನ ದಿನದಂದು ರಜೆ ಅವಧಿ ಎಂದು ಭಾವಿಸಿ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಮತದಾನ ಮುಖ್ಯವಾಗಿದ್ದು, ಯುವಕರು ಯಾವುದೇ ನಿರ್ಲಕ್ಷ್ಯ ತೋರದೇ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದರು.
ಗಮನಸೆಳೆದ ಸೆಲ್ಫಿ ಬೂತ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಂಗವಾಗಿ ನಿರ್ಮಿಸಿದ್ದ ಸೆಲ್ಫಿ ಬೂತ್ ವಿಶೇಷವಾಗಿ ಕಂಡುಬಂತು. ಅಧಿಕಾರಿಗಳು ಮತ್ತು ಯುವಕರು, ಸಾರ್ವಜನಿಕರು ಮತ ಚಲಾಯಿಸಿದ, ಇಂಕ್ ಹಾಕಿಸಿಕೊಂಡ ಬೆರಳು ತೋರಿಸುವುದರ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ನಂತರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಆಯುಕ್ತ ಹೇಮಂತ್‍ಕುಮಾರ್.ಎನ್ ಅವರು ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿದರು.
ಮ್ಯಾರಾಥಾನ್ ಓಟವು ವಿಮ್ಸ್ ಮೈದಾನದಿಂದ ಆರಂಭವಾಗಿ ಸುಧಾ ಕ್ರಾಸ್‍ನಿಂದ ಇನ್‍ಫ್ಯಾಂಟ್ರಿ ರಸ್ತೆ ಮೂಲಕ ಅಗ್ನಿಶಾಮಕ ದಳ ಕಚೇರಿ, ಎಸ್‍ಪಿ ಸರ್ಕಲ್ ಮಾರ್ಗವಾಗಿ ದುರ್ಗಮ್ಮ ಗುಡಿ, ರಾಯಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ನಟರಾಜ, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಜಿಲ್ಲಾ ಗೃಹ ರಕ್ಷಕ ದಳ, ಜಿಲ್ಲಾ ನೌಕರರ ಸಂಘ, ಚೈತನ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸನ್ಮಾರ್ಗ ಗೆಳೆಯರ ಬಳಗದವರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.