ಮ್ಯಾನ್ಮಾರ್: ೮೦ಕ್ಕೂ ಹೆಚ್ಚು ಪ್ರತಿಭಟನಾಕಾರರ ಹತ್ಯೆ

ಹೊಸದಿಲ್ಲಿ, ಎ.೧೧- ಮ್ಯಾನ್ಮಾರ್‌ನಲ್ಲಿ ಕ್ಷಿಪ್ರ ಕ್ರಾಂತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಮ್ಯಾನ್ಮಾರ್ ಭದ್ರತಾ ಪಡೆಗಳು ಯಂಗೂನ್ ಸಮೀಪ ಗುಂಡು ಹಾರಿಸಿದ್ದು, ಕನಿಷ್ಠ ೮೦ ಮಂದಿ ಮೃತಪಟ್ಟಿದ್ದಾರೆ ಎಂದು ಅಸಿಸ್ಟೆನ್ಸ್ ಅಸೋಸಿಯೇಶನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ (ಎಎಪಿಪಿ) ಪ್ರಕಟಿಸಿದೆ.
ಯಂಗೂನ್‌ನಿಮದ ಈಶಾನ್ಯಕ್ಕೆ ೯೦ ಕಿಲೋಮೀಟರ್ ದೂರದ ಬಗೊ ಎಂಬ ಪಟ್ಟಣದಲ್ಲಿ ಸೇನೆ ರೈಫಲ್ ಗ್ರೆನೇಡ್ ದಾಳಿ ನಡೆಸಿದ್ದರೂ ಅಪಾರ ಸಂಖ್ಯೆಯ ಸಾವು ನೋವು ತಕ್ಷಣ ಬೆಳಕಿಗೆ ಬಂದಿರಲಿಲ್ಲ. ಇದೀಗ ಮೃತದೇಹಗಳನ್ನು ಝೆಯಾರ್ ಮುನಿ ಪಗೋಡಾ ಆವರಣದಲ್ಲಿ ಗುಡ್ಡೆ ಹಾಕಿ ಇಡೀ ಪ್ರದೇಶವನ್ನು ಸೇನೆ ಸುತ್ತುವರಿದಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಫೆಬ್ರವರಿ ೧ರ ಸೇನಾ ಕ್ಷಿಪ್ರಕ್ರಾಂತಿ ವಿರುದ್ಧ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರಲ್ಲಿ ಶುಕ್ರವಾರ ೮೨ ಮಂದಿ ಗುಂಡಿಗೆ ಬಲಿಯಾಗಿದ್ದಾರೆ ಎಂದು ಎಎಪಿಪಿ ಮತ್ತು ಮ್ಯಾನ್ಮಾರ್ ನೌ ಸುದ್ದಿಸಂಸ್ಥೆ ಹೇಳಿವೆ. ಶುಕ್ರವಾರ ಮುಂಜಾನೆ ಆರಂಭವಾದ ಗುಂಡಿನ ದಾಳಿ ಸಂಜೆವರೆಗೂ ಮುಂದುವರಿದಿತ್ತು ಎಂದು ಮ್ಯಾನ್ಮಾರ್ ನೌ ಹೇಳಿದೆ. “ಇದು ಭೀಕರ ಹತ್ಯಾಕಾಂಡದಂತಿತ್ತು” ಎಂದು ಪ್ರತಿಭಟನೆಯ ಸಂಘಟಕ ಯೆ ಹಟ್ ಹೇಳಿದ್ದನ್ನು ಸುದ್ದಿಸಂಸ್ಥೆ ಉಲ್ಲೇಖಿಸಿದೆ. ನಗರದ ಹಲವು ಮಂದಿ ನಾಗರಿಕರು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಿಂದ ತಿಳಿದುಬಂದಿದೆ. ಕ್ಷಿಪ್ರಕ್ರಾಂತಿಯ ಬಳಿಕ ಇದುವರೆಗೆ ೬೧೮ ಮಂದಿ ಪ್ರತಿಭಟನಾಕಾರರನ್ನು ಸೇನೆ ಹತ್ಯೆ ಮಾಡಿದೆ ಎಂದು ಎಎಪಿಪಿ ಸ್ಪಷ್ಟಪಡಿಸಿದೆ. ಆದರೆ ಸೇನೆ ಇದನ್ನು ನಿರಾಕರಿಸಿದ್ದು, ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸನ್ ಸೂ ಕಿ ನೇತೃತ್ವದ ಪಕ್ಷ ರಿಗ್ಗಿಂಗ್ ಮಾಡಿ ಗೆಲುವು ಸಾಧಿಸಿದ್ದರ ವಿರುದ್ಧ ಕ್ಷಿಪ್ರಕ್ರಾಂತಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಇದನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. ಸೇನೆಯ ಪ್ರಕಾರ ೨೪೮ ಮಂದಿ ನಾಗರಿಕರು ಮತ್ತು ೧೬ ಮಂದಿ ಪೊಲೀಸರು ಮೃತಪಟ್ಟಿದ್ದಾರೆ ಎಂದು ಜುಂಟಾ ವಕ್ತಾರ ಮೇಜರ್ ಜನರಲ್ ಝಾವ್ ಮಿನ್ ತನ್ ಹೇಳಿದ್ದಾರೆ. ಭದ್ರತಾ ಪಡೆಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.