ಮ್ಯಾನ್ಮಾರ್ ಸೇನೆ ಗುಂಡಿಗೆ ಬಾಲಕಿ ಬಲಿ

ಮಾಂಡಲೆ, ಮಾ.೨೪- ಸದ್ಯ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ನಡೆಸುತ್ತಿರುವ ನರಮೇಧ ಮತ್ತಷ್ಟು ಹೆಚ್ಚಿದ್ದು, ನಾಗರಿಕರ ಹತ್ಯಾಕಾಂಡ ಮುಂದುವರೆದಿದೆ. ಈ ನಡುವೆ ದೇಶದಲ್ಲಿ ಭದ್ರತಾ ಪಡೆಗಳು ಏಳರ ಬಾಲಕಿಯನ್ನು ಹತ್ಯೆ ನಡೆಸಿದ್ದು, ಸದ್ಯ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ.
ಮ್ಯಾನ್ಮಾರ್‌ನಲ್ಲಿದ್ದ ಪ್ರಜಾಪ್ರಭುತ್ವ ಆಡಳಿತವನ್ನು ಅಂತ್ಯಗೊಳಿಸಿದ್ದ ಮಿಲಿಟರಿ ಪಡೆಗಳು ಸದ್ಯ ಅಲ್ಲಿ ಪೈಶಾಚಿಕ ಕೃತ್ಯವನ್ನೇ ನಡೆಸುತ್ತಿದ್ದು, ಮಿಲಿಟರಿ ಪಡೆಯ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಹತ್ಯೆ ನಡೆಸುತ್ತಿದೆ. ಈ ಮೂಲಕ ಮ್ಯಾನ್ಮಾರ್ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಇದರ ನಡುವೆ ಇದೀಗ ಏಳರ ಹರೆಯದ ಅಪ್ರಾಪ್ತ ಬಾಲಕಿಯನ್ನು ಅಲ್ಲಿನ ಮಿಲಿಟರಿ ಪಡೆ ಹತ್ಯೆ ನಡೆಸಿದ್ದು, ದೇಶದ ಜೊತೆಗೆ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ಮಾಂಡಲೆಯ ಚನ್ ಮ್ಯಾ ತಾಝಿ ಪ್ರಾಂತ್ಯದ ಮನೆಯಲ್ಲಿದ್ದ ಏಳರ ಹರೆಯದ ಬಾಲಕಿಯನ್ನು ಮಿಲಿಟರಿ ಪಡೆ ಬಂದೂಕಿನಿಂದ ಗುಂಡು ಹೊಡೆದು ಹತ್ಯೆ ನಡೆಸಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಫೆಬ್ರವರಿ ೧ರಿಂದ ಆರಂಭವಾದ ಮಿಲಿಟರಿ ದುರಾಡಳಿತ ಸದ್ಯ ಈವರೆಗೆ ೨೦ಕ್ಕೂ ಹೆಚ್ಚು ಮಕ್ಕಳನ್ನು ಹತ್ಯೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ದೇಶಾದ್ಯಂತ ೧೬೪ ಮಂದಿಗೂ ಹೆಚ್ಚು ನಾಗರಿಕರು ಮಿಲಿಟರಿ ಆಡಳಿತ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.