ಮ್ಯಾನ್ಮಾರ್ ಸೇನಾ ದಾಳಿಗೆ ೧೦೦ಕ್ಕೂ ಅಧಿಕ ಸಾವು

ಸ್ಯಾಂಗ್ಯಾಂಗ್ (ಮ್ಯಾನ್ಮಾರ್), ಏ.೧೨- ನೃತ್ಯ ಪ್ರದರ್ಶನ ನೀಡುತ್ತಿದ್ದ ಮಕ್ಕಳ ಮೇಲೆ ಮ್ಯಾನ್ಮಾರ್ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆ ಸ್ಯಾಂಗ್ಯಾಂಗ್‌ನಲ್ಲಿ ನಡೆದಿದೆ ಎನ್ನಲಾಗಿದೆ.
ಪ್ರಜಾಪ್ರಭುತ್ವ ಪರ ಗುಂಪುಗಳ ಪ್ರಬಲ ಭದ್ರಕೋಟೆ ಹಾಗೂ ಸದ್ಯ ಜೈಲಿನಲ್ಲಿರುವ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ನಾಯಕಿ ಅಂಗ್‌ಸಾನ್ ಸೂಕಿಯ ನೆಲೆಯಾಗಿರುವ ಸ್ಯಾಂಗ್ಯಾಂಗ್‌ನಲ್ಲಿ ಮ್ಯಾನ್ಮಾರ್ ಮಿಲಿಟರಿ ಪಡೆ ವೈಮಾನಿಕ ದಾಳಿ ನಡೆಸಿದೆ. ಸೇನಾಡಳಿತದ ವಿರುದ್ಧ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾಗರಿಕರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ವಾಯುದಾಳಿಯಲ್ಲಿ ಸಮುದಾಯ ಭವನವನ್ನು ಗುರಿಯಾಗಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಸಾವು-ನೋವುಗಳು ಸಂಭವಿಸಿದೆ. ಸ್ಥಳೀಯ ಪ್ರಜಾಪ್ರಭುತ್ವ-ಪರ ಗುಂಪು ಮತ್ತು ಮಾಧ್ಯಮಗಳ ಪ್ರಕಾರ ಮೃತಪಟ್ಟವರ ಸಂಖ್ಯೆ ೧೦೦ ಕ್ಕೆ ಏರಿದೆ. ಮ್ಯಾನ್ಮಾರ್ ಮಿಲಿಟರಿ ಪಡೆ ನಡೆಸಿದ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ ಮಧ್ಯ ಮ್ಯಾನ್ಮಾರ್‌ನಲ್ಲಿ ಮಕ್ಕಳು ಸೇರಿದಂತೆ ೧೦೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.
ಫೆ.೨೦೨೧ರ ದಂಗೆಯಲ್ಲಿ ಮಿಲಿಟರಿ ಅಧಿಕಾರ ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್ ಅವ್ಯವಸ್ಥೆಯಲ್ಲಿದೆ ಮತ್ತು ಅದರ ಆರ್ಥಿಕತೆ ಹದಗೆಟ್ಟಿದೆ. ಇದನ್ನು ವಿರೋಧಿಸಿ ಅಲ್ಲಿನ ಜನ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಮ್ಯಾನ್ಮಾರ್ ಮಿಲಿಟರಿ ಮತ್ತೊಮ್ಮೆ ಜನರಿಗೆ ಸೂಕ್ತ ಆಡಳಿತ ಒದಗಿಸದೆ ಯುದ್ಧದ ನಡವಳಿಕೆಯಿಂದ ನಾಗರಿಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದೆ.
ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್ ಪ್ರತಿಕ್ರಿಯಿಸಿ, ಹಿಂಸಾತ್ಮಕ ದಾಳಿಗಳ ಆಡಳಿತವು ಮಾನವ ಜೀವನವನ್ನು ಕಡೆಗಣಿಸುತ್ತದೆ. ಅಂತಹ ಆಡಳಿತವನ್ನು ಬಲವಾಗಿ ಖಂಡಿಸುತ್ತೇವೆ. ಫೆಬ್ರವರಿ ೨೦೨೧ರ ದಂಗೆಯ ನಂತರ ಮ್ಯಾನ್ಮಾರ್ ಭೀಕರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮ್ಯಾನ್ಮಾರ್‍ಗೆ ಮಾನವೀಯ ಜವಾಬ್ದಾರಿಯ ಸರ್ಕಾರ ಬೇಕಿದೆ. ಭೀಕರ ಹಿಂಸಾಚಾರವನ್ನು ನಿಲ್ಲಿಸಿ ಜನರ ಅಂತರ್ಗತ ಪ್ರಜಾಪ್ರಭುತ್ವದ ಆಕಾಂಕ್ಷೆಗಳನ್ನು ಗೌರವಿಸಲು ಅಮೆರಿಕ, ಮ್ಯಾನ್ಮಾರ್ ಆಡಳಿತಕ್ಕೆ ಕರೆ ನೀಡಿದ್ದಾರೆ.