ಮ್ಯಾದಾರ್ ಅವರಿಗೆ ಲಲಿತಕಲಾ ಅಕಾಡಮಿ ಗೌರವ ಫೆಲೋಶಿಪ್

ರಾಯಚೂರು.ಜು.೨೨- ಕರ್ನಾಟಕ ಲಲಿತಕಲಾ ಅಕಾಡೆಮಿಯು ೨೦೨೧-೨೨ ನೇ ಸಾಲಿನಲ್ಲಿ ಅತ್ಯುನ್ನತ ಕಲಾ ಸೇವೆ ಸಲ್ಲಿಸಿರುವ ರಾಯಚೂರಿನ ಹಿರಿಯ ಚಿತ್ರಕಲಾವಿದರಾದ ಎಚ್.ಎಚ್.ಮ್ಯಾದಾರ್ ಅವರಿಗೆ ಗೌರವ ಫೆಲೋಶಿಪ್ ಜೊತೆಗೆ ಎರಡು ಲಕ್ಷದ ನಗದು ಪುರಸ್ಕಾರ ಲಭಿಸಿದೆ. ಎಚ್.ಎಚ್.ಮ್ಯಾದಾರ್ ಅವರು ರಾಯಚೂರಿನ ಟಾಗೋರ್ ಸಂಸ್ಥೆಯ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದು, ಅನೇಕ ವರ್ಣಚಿತ್ರ, ರೇಖಾಚಿತ್ರ ವಿಶೇಷವಾಗಿ ಚುಕ್ಕಿಚಿತ್ರಗಳನ್ನು ರಚಿಸಿ ರಾಜ್ಯದಲ್ಲಿ ಖ್ಯಾತರಾಗಿದ್ದಾರೆ. ಮುಖ್ಯವಾಗಿ ಕೆಲವು ವರ್ಷಗಳಿಂದ ಚುಕ್ಕಿಚಿತ್ರಗಳಲ್ಲಿ ಅತ್ಯದ್ಭುತವಾದ ಚಿತ್ರಗಳನ್ನು ರಚಿಸಿದ್ದಾರೆ.
ಅವರು ಚಿತ್ರಕಲೆಯ ಜೊತೆಗೆ ಸಾಹಿತ್ಯ ಪರಿಷತ್ತು ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಮ್ಯಾದಾರ್ ಅವರು ಲಲಿತಾ ಕಲಾ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಈ ಪುರಸ್ಕಾರ ಬಂದಿರುವುದಕ್ಕೆ ಜಿಲ್ಲೆಯ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿದೆ. ಕಲಾವಿದ ಎಚ್.ಎಚ್. ಮ್ಯಾದಾರ್ ಅವರಿಗೆ ಸುರಭಿ ಸಾಂಸ್ಕೃತಿಕ ಬಳಗದ ಜಿ.ಸುರೇಶ್, ಜಿ.ಬಸವರಾಜ,ವೀರಹನುಮಾನ,ಈರಣ್ಣಬೆಂಗಾಲಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.