ಮ್ಯಾಂಚೆಸ್ಟೆರ್ ಯುನೈಟೆಡ್ ತಂಡದಿಂದ ರೊನಾಲ್ಡೊ ಔಟ್

ಲಂಡನ್, ನ.೨೩- ತಕ್ಷಣದಿಂದಲೇ ಜಾರಿಗೆ ಬರುವಂತೆ ಪರಸ್ಪರ ಒಪ್ಪಂದದ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವುದನ್ನು ಖಚಿತಪಡಿಸಲಾಗಿದೆ ಎಂದು ಕ್ಲಬ್ ಬಿಡುಗಡೆ ಮಾಡಲಾದ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ.
ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗಾನ್ ಜೊತೆಗಿನ ಅವರ ಇತ್ತೀಚಿನ ಸಂದರ್ಶನದಲ್ಲಿ ಮ್ಯಾಂಚೆಸ್ಟೆರ್ ಯುನೈಟೆಡ್‌ನ ಮ್ಯಾನೇಜರ್ ವಿರುದ್ಧ ರೊನಾಲ್ಡೋ ತೀವ್ರ ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದರು. ಬಳಿಕ ಇದು ಜಾಗತಿಕ ಕ್ರೀಡಾ ಲೋಕದಲ್ಲೇ ತಲ್ಲಣ ಸೃಷ್ಟಿಸಿತ್ತು. ಅಲ್ಲದೆ ಪ್ರಕರಣದಿಂದ ಮ್ಯಾಂಚೆಸ್ಟೆರ್ ಯುನೈಟೆಡ್ ತಂಡ ಕೂಡ ಮುಜುಗರಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರೊನಾಲ್ಡೊ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗಿತ್ತು. ತಂಡದಿಂದಲೇ ಬಿಡುಗಡೆ ಮಾಡಲಾಗಿದೆ. ಸಂದರ್ಶನದಲ್ಲಿ, ರೊನಾಲ್ಡೊ ಹಲವಾರು ವಿಷಯಗಳ ಬಗ್ಗೆ ಕ್ಲಬ್ ಅನ್ನು ಟೀಕಿಸಿದ್ದರು. ಕೆಲವು ಕ್ಲಬ್‌ಗಳ ಮುಖ್ಯಸ್ಥರು ತನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಸ್ಪೋಟಕ ಸಂದರ್ಶನದ ಪರಿಣಾಮವಾಗಿ ಯುನೈಟೆಡ್‌ನಿಂದ ರೊನಾಲ್ಡೊ ರನ್ನು ತೊರೆಯುವ ನಿರ್ಧಾರಕ್ಕೆ ಬಂದಂತೆ ತೋರುತ್ತಿದೆ ಎಂದು ವರದಿಗಳು ತಿಳಿಸಿವೆ. ತಮ್ಮ ಹೇಳಿಕೆಯಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ “ತಕ್ಷಣವೇ ಜಾರಿಗೆ ಬರುವಂತೆ ಪರಸ್ಪರ ಒಪ್ಪಂದದ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ” ಎಂದು ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮ್ಯಾಂಚೆಸ್ಟೆರ್ ಯುನೈಟೆಡ್ ತಂಡ ನೀಡಿಲ್ಲ.