ಮೌಲ್ಯ ರಹಿತ ಜೀವನ ವ್ಯರ್ಥ : ಹೂಗಾರ

ಕಲಬುರಗಿ:ಡಿ.23: ವ್ಯಕ್ತಿ ಎಷ್ಟೇ ಪದವಿ, ಪ್ರಶಸ್ತಿ-ಪುರಸ್ಕಾರ, ಜ್ಞಾನ ಪಡೆದು, ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ದಯೆ, ಕರುಣೆ, ಶಾಂತಿ, ಸಮದಾನ, ಅಹಿಂಸೆ, ತ್ಯಾಗ, ಪ್ರೀತಿ, ಶಿಸ್ತು, ಪರೋಪಕಾರ, ಸಮಾಜ ಸೇವೆ, ವಿಶಾಲ ಮನೋಭಾವ, ಅಸೂಯೆ ಮಾಡದಿರುವುದು, ಸಕಾರಾತ್ಮ ಚಿಂತನೆ, ನಿಸ್ವಾರ್ಥತೆ, ಸಹಿಷ್ಣತೆ, ಸತ್ಯಪಾಲನೆ, ದೌರ್ಜನ್ಯ, ಕಳ್ಳತನ, ಭ್ರಷ್ಟಾಚಾರ ಮಾಡದಿರುವುದು, ಜಾತ್ಯಾತೀತ ಮನೋಭಾವನೆಯಂತಹ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣ, ಸಫಲತೆ ಪಡೆಯಲು ಸಾಧ್ಯವಾಗುತ್ತದೆ ಎಂದು ಶರಣ ಚಿಂತಕ ಸಂತೋಷ ಹೂಗಾರ ಅಭಿಮತಪಟ್ಟರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ತಾಲೂಕಿನ ಚಿಗರಹಳ್ಳಿಯ ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರುಪೀಠದ ಸಮುದಾಯ ಭವನದಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನವಾದ ಶುಕ್ರವಾರ ಜರುಗಿದ ‘ವಚನಗಳು ಮತ್ತು ಜಾನಪದದಲ್ಲಿ ಜೀವನದ ಮೌಲ್ಯಗಳು’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಬಸವಾದಿ ಶರಣರ ವಚನಗಳು ಮತ್ತು ಅನುಭಾವಿಗಳಿಂದ ರಚಿತವಾದ ಜಾನಪದದಲ್ಲಿ ಸಂಪೂರ್ಣವಾಗಿ ಜೀವನದ ಮೌಲ್ಯಗಳು ಅಡಗಿವೆ. ಎಲ್ಲರು ವಚನಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ವೃದ್ಧಾಶ್ರಮಗಳು ಮೌಲ್ಯಗಳ ನಾಶದ ಸಂಕೇತವಾಗಿವೆ. ಕೇವಲ ಮನುಷ್ಯನಾಗಿ ಜನಿಸಿದರೆ ಉಪಯೋಗವಿಲ್ಲ. ಜೊತೆಗೆ ಮನುಷತ್ವದಿಂದ ಬದುಕುವುದನ್ನು ಕಲಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಉಪನ್ಯಾಸಕ ಸಾಹೇಬಗೌಡ್ ಪಾಟೀಲ ಅವರು ‘ಆರೋಗ್ಯ ಸಂರಕ್ಷಣಾ ಕ್ರಮಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪೂಜ್ಯ ಸಿದ್ದಬಸವ ಕಬೀರ ಸ್ವಾಮೀಜಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ನಾಗಮ್ಮಿ ಹಾದಿಮನಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.