ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ: ಸಿಎಂ

Vivakanada jayanthi celebration at v.soudha banquet hall cm yudiurappa dcm aswathnarayan and others are seen

ಬೆಂಗಳೂರು, ಜ. ೧೨- ಉತ್ತಮ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿರುವ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಆಲೋಚನಾ ಶಕ್ತಿ, ಜ್ಞಾನ, ಕೌಶಲ್ಯಾಭಿವೃದ್ಧಿ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ಹಾಗೂ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶವನ್ನು ರಾಜ್ಯ ಶಿಕ್ಷಣ ನೀತಿ ಹೊಂದಿದ್ದು, ಈ ನೀತಿ ಜಾರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆ ಆಗಲಿದೆ ಎಂದರು.
ರಾಜ್ಯದ ಉನ್ನತ ಶಿಕ್ಷಣ ಇಲಾಖೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾಂದರ ೧೫೮ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದ ಮಹತ್ವವನ್ನು ಸಾರಿದ ವಿವೇಕಾನಂದರ ಕನಸನ್ನು ಸಾಕಾರಗೊಳಿಸಲು ಉನ್ನತ ಶಿಕ್ಷಣ ವಲಯದಲ್ಲಿ ದೂರದೃಷ್ಟಿಯ ಬದಲಾವಣೆಯನ್ನು ಸರ್ಕಾರ ತಂದಿದೆ ಎಂದರು.
ಯುವಜನತೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಗುಣಮಟ್ಟದ ಉನ್ನತ ಶಿಕ್ಷಣ ಅತ್ಯವಶ್ಯ ಎಂದು ಸರ್ಕಾರ ಮನಗಂಡು ಉನ್ನತ ಶಿಕ್ಷಣ ವಲಯದಲ್ಲಿ ದೂರದೃಷ್ಟಿಯ ಬದಲಾವಣೆ ತಂದಿದೆ ಎಂದು ಹೇಳಿದರು.
ಸುಕ್ಷಿತ, ಸುಸಕ್ಷಿತ, ಸಮರ್ಥ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಯುವಜನತೆ ರಾಜ್ಯ ಮತ್ತು ದೇಶದ ಆಸ್ತಿ. ಒಟ್ಟು ಜನಸಂಖ್ಯೆಯ ಸರಾಸರಿ ಶೇ. ೪೦ ರಷ್ಟಿರುವ ಯುವಜನತೆಯನ್ನು ರಾಷ್ಟ್ರ ನಿರ್ಮಾಣ ಮತ್ತು ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ಸರ್ಕಾರ ಒದಗಿಸುತ್ತಿದೆ ಎಂದರು.
ರಾಜ್ಯ ಸರ್ಕಾರ ಸರ್ಕಾರಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ೪೩೦ ಕೋಟಿ ರೂ.ಗಳನ್ನು ನೀಡಿದೆ ಎಂದರು.
ಹೆಣ್ಣು ಮಕ್ಕಳಿಗೆ ಶಿಕ್ಷಣ ಶುಲ್ಕವಿನಾಯ್ತಿ
ಮಹಿಳೆಯರ ಸ್ಥಿತಿಗತಿಗಳು ಸುಧಾರಿಸದರೆ ದೇಶದ ಉನ್ನತಿ ಸಾಧ್ಯವಿಲ್ಲ ಎಂದು ಸ್ವಾಮಿ ವಿವೇಕಾನಂದರು ಬಹು ಹಿಂದೆಯೇ ಮಹಿಳಾ ಸಬಲೀಕರಣವನ್ನು ಪ್ರತಿಪಾದಿಸಿದ್ದರು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪದವಿಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪಂಗಡದ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಟಿ ಮತ್ತು ಜೆ ಇ ಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉನ್ನತ ವ್ಯಾಸಂಗಕ್ಕೆ ಮತ್ತು ಉದ್ಯೋಗ ಪಡೆಯಲು ಅಗತ್ಯವಾದ ತರಬೇತಿ ನೀಡಲಾಗುತ್ತಿದೆ ಎಂದರು.
ನೂತನ ಹಾಗೂ ಹೆಚ್ಚು ಪರಿಣಾಮಕಾರಿಯಾದ ಡಿಜಿಟಲ್ ಕಲಿಕೆ ಯೋಜನೆಯನ್ನು ೪೩೦ ಸರ್ಕಾರಿ ಕಾಲೇಜುಗಳು, ೮೭ ಸರ್ಕಾರಿ ಪಾಲಿಟೆಕ್ನಿಕ್, ೧೪ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ೩೫ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಡಿಜಿಟಲ್ ಕಲಿಕೆಯನ್ನು ಅನುಷ್ಟಾನಗೊಳಿಸಲು ಪೂರಕವಾಗುವಂತೆ ಸುಮಾರು ೧೫೦ ಕೋಟಿ ರೂ. ವೆಚ್ಚದಲ್ಲಿ ಟ್ಯಾಬ್‌ಲೆಟ್ ಪಿಸಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಯುವಜನರ ಮಾನಸಿಕ, ಆರೋಗ್ಯದ ದೃಷ್ಟಿಯಿಂದ ದೇಶದಲ್ಲಿಯೇ ಮೊದಲ ಬಾರಿಗೆ ಯುವ ಸ್ಪಂದನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮಗಳ ಮೂಲಕ ೨೦ ಸಾವಿರಕ್ಕೂಹೆಚ್ಚು ಯುವ ಜನರು ಮಾರ್ಗದರ್ಶನ ಮತ್ತು ಕೌನ್ಸಿಲಿಂಗ್ ಪಡೆದಿದ್ದಾರೆ ಎಂದರು.
ವಿವೇಕಾನಂದರ ವಿಚಾರಧಾರೆಗಳನ್ನು ಅರಿತು ಯುವಜನರು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ದೇಶ ಭಕ್ತಿಯನ್ನು ರೂಢಿಸಿಕೊಂಡು ಸಮಾಜದ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಸ್ವಾಮಿ ವಿವೇಕಾನಂದರು ಪ್ರಸಿದ್ಧ ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಚಿಂತಕರಾಗಿದ್ದು, ಅವರ ಚಿಂತನೆಗಳು ಸದಾ ಸ್ಪೂರ್ತಿ. ಭಾರತದ ತತ್ವಜ್ಞಾನ, ವೇದ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯ ಜಗತ್ತಿನಲ್ಲಿ ಪ್ರಚಾರ ಮಾಡಿ ದೇಶಕ್ಕೆ ಕೀರ್ತಿ ತಂದವರು ವಿವೇಕಾನಂದ ಅವರು, ಶಿಕ್ಷಣ ಎಂದರೆ ವ್ಯಕ್ತಿತ್ವ, ತೀರ್ಮಾನ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ ಚಾರಿತ್ರ್ಯ ನಿರ್ಮಾಣದ ಮೂಲಕವೇ ರಾಷ್ಟ್ರ ನಿರ್ಮಾಣ ಎಂಬುವುದು ಅವರ ಅಭಿಪ್ರಾಯವಾಗಿತ್ತು ಎಂದರು.
ಭವ್ಯ ಭಾರತದ ಕನಸನ್ನು ಕಂಡಿದ್ದು ಸ್ವಾಮಿ ವಿವೇಕಾನಂದರು ಯುವಜನತೆ ಹಾಗೂ ಶಿಕ್ಷಣದ ಬಗ್ಗೆ ವಿಶಿಷ್ಟ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇದಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪನವರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಯುವ ಸ್ಪಂದನ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‌ನಾರಾಯಣ, ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಅಪಾರ ಮುಖ್ಯ ಕಾರ್ಯದರ್ಶಿ ಡಾ. ಎ.ವಿ. ರಮಣರೆಡ್ಡಿ, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕುಮಾರ್‌ನಾಯಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.