ಮೌಲ್ಯವನ್ನು ಎತ್ತಿ ಹಿಡಿಯುವ ಶರಣರ ವಚನಗಳು

ದಾವಣಗೆರೆ.ಏ.೨೫; ಸತ್ಯ ಶುದ್ಧ ಕಾಯಕ, ಸಮಾನತೆ, ಪ್ರಾಮಾಣಿಕ ಜೀವನವನ್ನು ಕಲಿಸಿಕೊಟ್ಟ ಬಸವಣ್ಣ ಎಲ್ಲ ಕಾಲಕ್ಕೂ ಸಲ್ಲುವ ಆದರ್ಶ ಶರಣ. ಅನುಭವದಿಂದ ರಚಿಸಿದ ಅನುಭಾವದ ವಚನಗಳ ಪರಿಪಾಲನೆಯು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ  ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆತ್ಮಸಾಕ್ಷಿ, ಅಂತಃಪ್ರಜ್ಞೆಯನ್ನು ಜಾಗ್ರತಗೊಳಿಸಿದ ಬಸವಾದಿ ಶರಣರು, ಕೇವಲ ಬೋಧನೆ ಮಾಡಲಿಲ್ಲ, ಅನುಭವಿಸಿದ್ದನ್ನು ಹೇಳಿದ್ದಾರೆ. ಮೌಲ್ಯವನ್ನು ಎತ್ತಿ ಹಿಡಿಯುವ ಶರಣರ ವಚನಗಳು ಸಾಮಾಜಿಕ ಪರಿವರ್ತನೆಯ ಹಾದಿಯನ್ನು ತೋರುತ್ತವೆ ಎಂದು ನುಡಿದರು.
ಹನ್ನೆರಡನೇ ಶತಮಾನದಲ್ಲಿಯೇ ಕಾಯಕ ಪ್ರಜ್ಞೆ, ಸಾಮಾಜಿಕ ಭದ್ರತೆ, ಆರ್ಥಿಕ ಸಮೃದ್ಧಿಯನ್ನು ಚಿಂತನೆಯ ಮೂಲಕ ಕಂಡುಕೊAಡರು. ಅಸಾಧ್ಯವೆಂಬುದನ್ನು ಸಾಧ್ಯವಾಗಿಸಿದರು. ಜಾತಿ, ವರ್ಣ, ವರ್ಗರಹಿತ ಸಮಾಜದ ಮೂಲಕ ಜನರ ಏಳ್ಗೆಯನ್ನು ಕಂಡುಕೊAಡರು. ಕಾಯಕ, ದಾಸೋಹ ತತ್ವಗಳ ಮೂಲಕ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಡಿಗಲ್ಲು ಹಾಕಿದ ಶ್ರೇಯಸ್ಸು ಬಸವಣ್ಣನಿಗೆ ಸಲ್ಲುತ್ತದೆ ಎಂದರು.ಧಾರ್ಮಿಕ ಪರಿಕಲ್ಪನೆಯಲ್ಲಿ ಬುದ್ಧನ ನಂತರ ಸಮಾಜದ ಏಳ್ಗೆಗೆ ಶ್ರಮಿಸಿದ್ದು ಬಸವಣ್ಣ. ಬುದ್ಧ, ಬಸವಣ್ಣನ ವಿಚಾರಗಳಲ್ಲಿ, ಯೋಜನೆಗಳ ಅನುಷ್ಠಾನದಲ್ಲಿ ಸಮಾನ ಚಿಂತನೆಗಳು ವ್ಯಕ್ತವಾಗುತ್ತವೆ. ಇವರ ತತ್ವ, ಮೌಲ್ಯಗಳನ್ನೇ ಆಧರಿಸಿ ಡಾ.ಬಾಬಾಸಾಹೇಬ ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನವು ಜಗತ್ತಿನ ಶ್ರೇಷ್ಠತೆ ಮನ್ನಣೆ ಪಡೆಯಲು ಸಾಧ್ಯವಾಗಿದೆ. ಆದ್ದರಿಂದಲೇ ಬುದ್ಧ, ಬಸವಣ್ಣನ ನಂತರ ಸೇರಿಕೊಳ್ಳುವ ಮತ್ತೊಂದು ಹೆಸರು ಭೀಮ (ಡಾ.ಬಿ.ಆರ್.ಅಂಬೇಡ್ಕರ್) ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯಶಾಸ್ತç ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಅಶೋಕಕುಮಾರ ಪಾಳೇದ ಮಾತನಾಡಿ, ಹನ್ನೆರಡನೇ ಶತಮಾನದ ಶ್ರೇಣೀಕೃತ ಸಮಾಜದಲ್ಲಿ ಅಸ್ಪೃಶ್ಯತೆ, ಕರ್ಮ ಸಿದ್ಧಾಂತದ ಆಚರಣೆಯ ಶೋಷಣಾ ವ್ಯವಸ್ಥೆಗೆ ಪರ್ಯಾಯ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದ ಬಸವಣ್ಣನ ವಿಚಾರಗಳು ಜಗತ್ತಿನ ಸಾರ್ವಕಾಲಿಕ ಸರ್ವಶ್ರೇಷ್ಠ ಚಿಂತನೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.ಜಾತಿ, ಲಿಂಗ, ವರ್ಣ ಭೇದವಿಲ್ಲದ ಸಮಾಜ ನಿರ್ಮಿಸಿ, ಎಲ್ಲ ಮನುಷ್ಯರನ್ನೂ ಸಮಾನವಾಗಿ ಕಾಣುವ ಆಶಯ ಬಸವಣ್ಣನವರದಾಗಿತ್ತು. ದೇಹ ದಂಡಿಸಿ ದುಡಿದ ಶ್ರಮಕ್ಕೆ ಮನ್ನಣೆ, ಸತ್ಯ ಮಾರ್ಗದಲ್ಲಿ ನೀತಿಯುತವಾಗಿ ಗಳಿಸಿದ ಆದಾಯ, ಗಳಿಕೆಯ ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದು ಬಸವಣ್ಣ ಮಾತ್ರ. ಕಲ್ಲು, ಮಣ್ಣು, ಗಿಡ, ಮರ ಬಳ್ಳಿ, ಪ್ರಾಣಿ ಪಕ್ಷಿಗಳ ಸ್ಥಾವರ ಚಿತ್ರಗಳಲ್ಲಿ ದೇವರನ್ನು ಕಾಣದೆ ಮನುಷ್ಯರಲ್ಲಿಯೇ ದೇವರನ್ನು ಕಾಣುವ, ದೇಹವನ್ನೇ ದೇಗುಲ ಮಾಡಿಕೊಂಡು, ಇಷ್ಟಲಿಂಗವನ್ನೇ ಸಾಕ್ಷಾತ್ ಪರಮಾತ್ಮನ ಕುರುಹಾಗಿ ಮಾಡಿಕೊಂಡು ಪೂಜಿಸಿದ ಬಸವಾದಿ ಶರಣರು ನುಡಿದಂತೆ ನಡೆದರು, ನಡೆದಂತೆ ಬದುಕಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.