ಮೌಲ್ಯಯುತ, ಸಾಮರಸ್ಯ ಬದುಕಿನ ಶಿಕ್ಷಣ ನೀಡಿ, ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಭಿಮತ

ಚಿಕ್ಕಬಳ್ಳಾಪುರ, ಸೆಪ್ಟೆಂಬರ್-05: ಸಾಮಾಜಿಕ ಸಾಮರಸ್ಯೆಯನ್ನು ಹಾಗೂ ಸಾಮಾಜಿಕ ಬದ್ಧತೆಯನ್ನು ಕಾಪಾಡುವಂತಹ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸಲಹೆ ನೀಡಿದರು.

ಅವರು ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ, ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಮಾಜಿ ರಾಷ್ಟ್ರಪತಿ ಹಾಗೂ ತತ್ವಶಾಸ್ತ್ರಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸಾಧನೆಯ ವಿವರವನ್ನು ಮಕ್ಕಳಿಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು, ಶಾಲಾ ಕಾಲೇಜುಗಳಲ್ಲಿ ಮಾಡಬೇಕು, ಅವರ ಸಾಧನೆಯೇ ನಮಗೆ ಸ್ಪೂರ್ತಿಯಾಗಿದೆ. ಶಿಕ್ಷಣದಲ್ಲಿ ಕೇವಲ ಅಂಕಗಳಿಕೆಯೇ ಮುಖ್ಯವಲ್ಲ ಅದರ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಶಿಕ್ಷಣ ಕ್ಷೇತ್ರ ಜಾಗತಿಕವಾಗಿ ಬಹಳ ಬದಲಾವಣೆ ಹೊಂದಿದೆ. ಅದಕ್ಕೆ ಹೊಂದಿಕೊಳ್ಳುವ ಜ್ಞಾನ ಬೆಳೆಸಿಕೊಳ್ಳಬೇಕು.

ಪ್ರಸ್ತುತವಾಗಿ ಶಿಕ್ಷಣವನ್ನು ಕುಟುಂಬದ ಪೋಷಣೆ ಮಾಡುವ ಸಾಮರ್ಥ್ಯ ವೃದ್ಧಿಸುವ ಉದ್ದೇಶಕ್ಕೇ ಕೊಡಿಸುತ್ತಿದ್ದಾರೆ. ಇಂಗ್ಲೀಷ್ ಮಾಧ್ಯಮವನ್ನು ಕಡೆಗಣಿಸುವಂತಿಲ್ಲ. ಮಾತೃ ಭಾಷೆಗೆ ಒತ್ತು ನೀಡಿ ಇತರ ಭಾಷೆಗಳನ್ನು ಕಲಿಯಬೇಕು. ದೊಡ್ಡ ಮಟ್ಟದಲ್ಲಿ ಶೈಕ್ಷಣಿಕವಾಗಿ ಮಹಿಳೆಯರು ಮುಂದಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಸಹಾಯಕವಾಗಿದೆ. ಇದನ್ನು ನಾವು ಕಾಪಾಡುವ ಕಾರ್ಯ ಮಾಡಬೇಕು. ಸ್ವಚ್ಛತೆ, ಪ್ಲಾಸ್ಟಿಕ್ ಮುಕ್ತತೆ ಹಾಗೂ ಪರಿಸರ ಕಾಳಜಿ ಬಗ್ಗೆ ಶಿಕ್ಷಕರು ಪ್ರಯೋಗಿಕವಾಗಿ ಮನಸ್ಸಿಗೆ ನಾಟುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ ಕೊಡಬೇಕು. ಆ ಮೂಲಕ ಸ್ವಚ್ಛತಾ ಕಾರ್ಯಗಳಲ್ಲಿ ಶಿಕ್ಷಕರು ಭಾಗಿಯಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಶಾಲೆ, ಕಾಲೇಜುಗಳಲ್ಲಿರುವ ಶೌಚಾಲಯಗಳ ಬಳಕೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಆ ಗೌರವ, ವೃತ್ತಿ ಧರ್ಮ, ಗುರು ಸಂಹಿತೆಯನ್ನು ಪಾಲಿಸುವಂತಹ ಶಿಕ್ಷಕರು, ಉಪನ್ಯಾಸಕರು ನೀವಾಗಬೇಕು. ವೃತ್ತಿಯನ್ನು ವ್ಯಾಪಾರಿಕರಣ ಮಾಡಬಾರದು, ಕಾಲೇಜು/ಶಾಲಾ ಅವಧಿಯ ನಂತರ ಇತರ ವ್ಯವಹಾರಗಳಲ್ಲಿ ತೊಡಗುವುದು ತಮ್ಮ ವೃತ್ತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಪ್ರೋ|| ಕೋಡಿರಂಗಪ್ಪ ಅವರು ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಮಾಜಿ ರಾಷ್ಟ್ರಪತಿ, ತತ್ವಶಾಸ್ತ್ರಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್ ಅವರಂತೆ ಇಂದಿನ ಶಿಕ್ಷಕರು ಅಧ್ಯಯನ ಶೀಲರಾಗಬೇಕು. ತಾವು ಭೋದಿಸುವ ವಿಷಯದಲ್ಲಿ ಪರಿಣತಿ ಹೊಂದಿ ಪೂರ್ಣ ಹಿಡಿತ ಸಾಧಿಸಬೇಕು. ವೃತ್ತಿ ಧರ್ಮ ಪಾಲಿಸಿ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಪಡಬೇಕು. ಆ ಮೂಲಕ ದೇಶ, ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಮಾಜದಲ್ಲಿ ಎಲ್ಲರಿಗೆ ಶಿಕ್ಷಣ ನೀಡಿದರೆ ಇತರೆ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.

ಶಾಸಕ ಪ್ರಧೀಪ್ ಈಶ್ವರ್ ಮಾತನಾಡಿ, ಶಿಕ್ಷಕರು ದೀರ್ಘ ಕಾಲಿಕವಾಗಿ ದುಡಿಯುತ್ತ ತಮ್ಮ ಆರೋಗ್ಯದ ಕಡೆ ನಿರ್ಲಕ್ಷ ವಹಿಸಬಾರದು. ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಗಮನಹರಿಸಬೇಕು. ತಾವು ದುಡಿದ ಹಣವನ್ನು ಒಂದಷ್ಟು ಉಳಿಸಿ ನಿವೃತ್ತಿ ನಂತರದ ಬದುಕಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿ ಎಲ್ಲಾ ಶಿಕ್ಷಕ ವರ್ಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಶಾಲಾ ಸಾಕ್ಷರತಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಉಪನಿರ್ದೇಶಕ (ಅಭಿವೃದ್ಧಿ) ಮುನಿಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶಶಿಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ನಿವೃತ್ತ ಶಿಕ್ಷಕರು, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ತತ್ವಶಾಸ್ತ್ರಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಸಲ್ಲಿಸಲಾಯಿತು. ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನಿಸಲಾಯಿತು.