ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ವಚನಗಳು ಪಾಲಿಸಿ: ಡಾ. ಪೂರ್ಣಿಮಾ ಜಿ. ಸಲಹೆ

ಬೀದರ್:ಫೆ.18: ‘ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವನರು ವಚನಗಳ ಮೂಲಕ ಪ್ರತಿಪಾದಿಸಿದ ತತ್ವಾದರ್ಶಗಳನ್ನು ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿ ಅರಿತುಕೊಂಡು ತಮ್ಮ ಬದುಕಿನಲ್ಲಿ ಅಚ್ಚುಕಟ್ಟಾಗಿ ಪಾಲಿಸಿದರೆ ಮಾತ್ರ ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ’ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಪೂರ್ಣಿಮಾ ಜಿ. ಅವರು ತಿಳಿಸಿದರು.
ನಗರದ ಮಾಮನಕೇರದಲ್ಲಿ ಇರುವ ಜ್ಞಾನಸುಧಾ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಬಸವಣ್ಣ ಸೇರಿದಂತೆ 12ನೇ ಶತಮಾನದ ಎಲ್ಲ ವಚನಕಾರರು ಬೋಧಿಸಿದ ವಚನಗಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ಭಾವೈಕ್ಯತೆಯ ಸಂದೇಶಗಳು ಅಡಗಿವೆ. ಅವುಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಪಾಲನೆ ಮಾಡುವುದರಿಂದ ಮಾತ್ರ ಜಾತಿಭೇದವಿಲ್ಲದ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಿದೆ. ನಮಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಬಸವಣ್ಣನವರ ಪ್ರತಿಯೊಂದು ವಚನಗಳು ದಾರಿದೀಪಗಳಾಗಿವೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನ ಸೇರಿದಂತೆ ಎಲ್ಲ ವಚನಗಳ ಅರ್ಥವನ್ನು ಸರಿಯಾಗಿ ಅರಗಿಸಿಕೊಂಡು ಬದುಕು ನಡೆಸಿದರೆ ಸಮಾಜದಲ್ಲಿ ನಮ್ಮ ಗೌರವ ಹೆಚ್ಚಾಗುತ್ತದೆ’ ಎಂದು ಹೇಳಿದರು.
‘ಬಸವಣ್ಣನವರು ಅನುಭವ ಮಂಟಪದ ಮೂಲಕ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. ಅಲ್ಲಿ ಎಲ್ಲ ಸಮುದಾಯುದ ಶರಣರು ಸೇರಿ ಜಾತಿ ಭೇದ ಮತ್ತು ಲಿಂಗತಾರತಮ್ಯವಿಲ್ಲದ ಸಮಾನತೆಯ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಚಿಂತನ ಮಂಥನ ನಡೆಸುತ್ತಿದ್ದರು. ಸಮಾಜದಲ್ಲಿದ್ದ ಅಸ್ಪøಶ್ಯತೆ ಹಾಗೂ ಮೌಢ್ಯಗಳನ್ನು ತೊಡೆದು ಹಾಕಿ ಒಂದು ಉತ್ತಮ ಸಂಸ್ಕಾರಯುತ ಸಮಾಜವನ್ನು ನಿರ್ಮಿಸುವ ದಿಸೆಯಲ್ಲಿ ಪ್ರಯತ್ನಿಸಿದ್ದ ಬಸವಣ್ಣನವರನ್ನು ನಮ್ಮ ರಾಜ್ಯದ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಕ್ರಮ ಶ್ಲಾಘನೀಯವಾಗಿದೆ’ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ಮಾತನಾಡಿ, ‘ಶ್ರೀರಾಮ, ಬುದ್ಧ, ಬಸವ, ಶಿಶುನಾಳಶರೀಫ ಇವರೆಲ್ಲರೂ ನಮಗೆ ಆದರ್ಶ ಪುರುಷರು. ಇವರು ಬೋಧಿಸಿದ ಆದರ್ಶ ತತ್ವಗಳು ಎಲ್ಲರೂ ತಮ್ಮ ಜೀವನದಲ್ಲಿ ಅನುಸರಿಸಬೇಕು. ಬದುಕಿನಲ್ಲಿ ನೆಮ್ಮದಿ ಇರಬೇಕು ಅಂದರೆ ಬಸವಣ್ಣನವರು ಪ್ರತಿಪಾದಿಸಿದ ತತ್ವಗಳಲ್ಲಿ ಒಂದಾದ ‘ಕಾಯಕವೇ ಕೈಲಾಸ’ ಎಂಬ ತತ್ವ ಶ್ರದ್ಧೆಯಿಂದ ಪಾಲಿಸಬೇಕು’ ಎಂದು ಸಲಹೆ ನೀಡಿದರು.
‘ಜಗಜ್ಯೋತಿ ಬಸವೇಶ್ವರರು ವಚನಗಳಲ್ಲಿ ಮಾನವೀಯ ಗುಣಗಳನ್ನು ಸಾರಿದ್ದಾರೆ. ಅಸ್ಪøಶ್ಯತೆ ನಿರ್ಮೂಲನೆ ಮಾಡಲು, ದೀನ ದಲಿತರ ಹಾಗೂ ಶೋಷಿತ ಸಮುದಾಯದವರಿಗೆ ಸಮಾನತೆಯ ಬದುಕು ಕಲ್ಪಿಸಿಕೊಡುವ ದಿಸೆಯಲ್ಲಿ ಧ್ವನಿ ಎತ್ತಿದ ಮೊದಲ ನಾಯಕ ಬಸವಣ್ಣ. ಇಂತಹ ಮಹಾನ್ ನಾಯಕನನ್ನು ನಮ್ಮ ರಾಜ್ಯದ ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಹಳ ಸಂತಸವಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಬಸವಣ್ಣನವರ ವಚನಗಳನ್ನು ವಾಚನ ಮಾಡಿದರು. ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ ಅವರು ಬಸವಣ್ಣನವರ ವಚನವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನಸೆಳೆದರು. ಉಪಪ್ರಾಚಾರ್ಯರಾದ ಕಲ್ಪನಾ ಮೋದಿ, ಮೇಲ್ವಿಚಾರಕರಾದ ರಜನಿ ಮೈಲೂರಕರ್, ಸಾಯಿಗೀತಾ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.