ಮೌಲ್ಯಯುತ ಜೀವನ ಪದ್ಧತಿಯನ್ನು ಗುರುಕುಲ ಕಲಿಸುತ್ತದೆ

ಗುತ್ತಲ,ಜೂ7: ಶಿಕ್ಷಣದ ಜತೆಗೆ ಭವಿಷ್ಯದ ಜೀವನಕ್ಕೆ ಬೇಕಾಗುವ ಮೌಲ್ಯಗಳಾದ ಸಂಸ್ಕಾರ, ಸಂಸ್ಕೃತಿ, ಜೀವನ ಪದ್ಧತಿಯನ್ನು ಗುರುಕುಲ ಕಲಿಸಿ ಕೊಡುತ್ತದೆ ಎಂದು ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಹೇಳಿದರು.
ಸಮೀಪದ ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಅವರ 118ನೇ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಹಿರಿಯ ಗಾಂಧಿವಾದಿ, ಕರ್ನಾಟಕದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಗುದ್ಲೆಪ್ಪ ಹಳ್ಳಿಕೇರಿ ಮತ್ತು ಅವರ ಕುಟುಂಬ ಈ ಸಂಸ್ಥೆ ಕಟ್ಟಲು ಸಾಕಷ್ಟು ಶ್ರಮ ವಹಿಸಿದೆ. ಹಸಿರು ಪರಿಸರದ ಗುರುಕುಲದಲ್ಲಿ ಜ್ಞಾನ, ಶಿಕ್ಷಣದೊಂದಿಗೆ ನೈತಿಕ ಶಿಕ್ಷಣ ಪಡೆಯುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯ ಎಂದರು.
ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿ ಸ್ವೀಕರಿಸಿದ ಸಮಾಜ ಸೇವಕ ಹಾಗೂ ಸ್ವರ್ಣಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗುರುಪಾಟಿ ವೆಂಕಟ ಸತ್ಯವರ ಪ್ರಸಾದ ಮಾತನಾಡಿ, ಸಮಾಜದಲ್ಲಿ ನಮ್ಮ ಸೇವೆ ಗುರುತಿಸಿ ದೇಶ-ವಿದೇಶಗಳಲ್ಲಿ, ಭವ್ಯವಾದ ಹೋಟೆಲ್, ಸಭಾ ಭವನಗಳಲ್ಲಿ ಅನೇಕ ಪ್ರಶಸ್ತಿ ಪಡೆದಿದ್ದೇನೆ. ಆದರೆ ಇಂದು ಗುರುಕುಲದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಎಲ್ಲ ಪ್ರಶಸ್ತಿಗಳಿಗಿಂತ ಹಿರಿದಾಗಿದ್ದು ನನ್ನ ಪಾಲಿನ ಸೌಭಾಗ್ಯ ಎಂದರು.
ಗ್ರಾಮೀಣ ಜನತೆಯ ಮಕ್ಕಳಿಗೆ ಅಕ್ಷರ ಜ್ಞಾನ ನೀಡಲು ಗುದ್ಲೆಪ್ಪ ಹಳ್ಳಿಕೇರಿ ಅವರು ಶಿಕ್ಷಣ ಸಂಸ್ಥೆ ಕಟ್ಟಿಸಿರುವುದು ಶ್ಲಾಘನೀಯವಾದದ್ದು. ಸಂಸ್ಥೆಗೆ 11.25 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು.
ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಹೊಸರಿತ್ತಿಯ ಗುರುಕುಲವು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಗರವಾಗಿದೆ ಎಂದರು.
ಪ್ರಧಾನ ಧರ್ಮದರ್ಶಿ ರಾಜೇಂದ್ರಪ್ರಸಾದ ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ವೀರಣ್ಣ ಚಕ್ಕಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಹಳೆಯ ವಿದ್ಯಾರ್ಥಿಗಳಾದ ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಶಶಿಧರ ಬಳ್ಳಾರಿ, ಪಿಎಸ್‍ಐ ನಿಂಗರಾಜ ಕರಕಣ್ಣನವರ, ಹೆಸ್ಕಾಂ ಸಹಾಯಕ ಎಂಜನಿಯರ್ ದೇವರಾಜ ಅದರೆಡ್ಡಿ, ಎಂಎನ್‍ಸಿ ಮ್ಯಾನೇಜರ್ ಜಾವೇಧ ನದಾಫ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್., ಉದ್ಯಮಿ ಸುಶೀಲ್ ಮಿಶ್ರಾ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರಮೇಶ ಏಕಬೋಟೆ, ವೀರಣ್ಣ ಅರಳಿ, ಎಂ.ಎಂ. ವಗ್ಗಣ್ಣನವರ, ದಯಾನಂದ ಕಲಕೋಟಿ, ಎಫ್.ಐ. ಶಿಗ್ಲಿ, ಸಿದ್ದಣ್ಣ ಹಳ್ಳಿಕೇರಿ, ಪ್ರಭು ಗೌರಿಮನಿ, ಶಶಿ ಸಾಲಿ, ಅರುಣಾ ಹಳ್ಳಿಕೇರಿ, ಗುದ್ಲೇಶ ಹಳ್ಳಿಕೇರಿ, ಶಂಭಣ್ಣ ಅರಳಿ, ಅನುಷಾ ಸತ್ಯವರ ಪ್ರಸಾದ, ಬಿ.ಎಸ್. ಮಡ್ಲೂರ ಹಾಗೂ ಗಾಂಧಿ ಗ್ರಾಮೀಣ ಗುರುಕುಲ, ಗಿರೀಶ ಅಂಕಲಕೋಟಿ, ಆರ್.ಎಸ್. ಪಾಟೀಲ, ಬಿ.ಎಸ್. ಯಾಗವಲ್, ಎಂ.ಪಿ. ಗೌಡಣ್ಣನವರ ಇದ್ದರು.