ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ: ಶ್ರೀ ರಂಭಾಪುರಿ ಜಗದ್ಗುರುಗಳು

ಕಲಬುರಗಿ,ಜ.07:ಮೌಢ್ಯತೆಯ ಮಾರಿ ಮನುಷ್ಯನನ್ನು ಆವರಿಸಿದೆ. ಸತ್ಯ ಧರ್ಮದ ಕಣ್ಣು ಕಾಣದಂತಾಗಿದೆ. ನ್ಯಾಯ ನೀತಿಗಳ ಅರಿವು ಇಲ್ಲದಂತಾಗಿ ಕವಲು ದಾರಿಯಲ್ಲಿ ಸಿಲುಕಿದ್ದಾನೆ. ನಿಜವಾದ ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿ ಇವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣದ ಕೊಲನಪಾಕ ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 67ನೇ ಜನ್ಮ ದಿನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕøತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ಹಿಂಬಾಲಿಸುತ್ತದೆ. ಜೀವನದಲ್ಲಿ ಯಶಸ್ಸು ಪಡೆಯಲು ಸ್ನೇಹಿತರಿರಬೇಕು. ಉನ್ನತ ಸಾಧನೆಗಾಗಿ ಶತ್ರುಗಳಿರಬೇಕಂತೆ. ಅಮೂಲ್ಯ ಜೀವನ ಸಾಗರದಲ್ಲಿ ಮೀನು ಮೊಸಳೆಗಳಷ್ಟೇ ಅಲ್ಲ ಅಪಾರ ಬೆಲೆ ಬಾಳುವ ಮುತ್ತುಗಳಿವೆ ಎಂಬುದನ್ನು ಮರೆಯಬಾರದು. ಅರಿತು ಬಾಳುವುದರಲ್ಲಿ ಶ್ರೇಯಸ್ಸಿದೆ. ಯಾವ ವಿಶ್ವಾಸ ಗಳಿಸದಿದ್ದರೂ ಚಿಂತೆಯಿಲ್ಲ. ಆದರೆ ಆತ್ಮ ವಿಶ್ವಾಸ ಎಂದಿಗೂ ಕಳೆದುಕೊಳ್ಳಬಾರದು. ಬದುಕು ಬಲಗೊಳ್ಳಬೇಕಲ್ಲದೇ ದುರ್ಬಲಗೊಳ್ಳಬಾರದೆಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶ ಸಾರ್ವಕಾಲಿಕ ಸತ್ಯ. ಕೈ ಕಾಲುಗಳಲ್ಲಿ ಶಕ್ತಿ ಇರುವ ತನಕ ಧರ್ಮ ಸಂಸ್ಕøತಿಯ ಪುನರುತ್ಥಾನಕ್ಕಾಗಿ ಶ್ರಮಿಸುವ ಸಂಕಲ್ಪ ನಮ್ಮದಾಗಿದೆ ಎಂದ ಜಗದ್ಗುರುಗಳು ಕೊಲನಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರ ಅಭಿವೃದ್ಧಿಪಡಿಸಬೇಕೆಂಬ ದೂರದೃಷ್ಟಿಯಿಂದ ಶಿವರಾತ್ರಿ-ಯುಗಾದಿ ಹೊರತು ಪಡಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ಅಮವಾಸ್ಯೆಗೆ ಕೊಲನುಪಾಕ ಕ್ಷೇತ್ರಕ್ಕೆ ಬರುವುದಾಗಿ ಸಂಕಲ್ಪ ಕೈಗೊಂಡರು. ಶ್ರೀ ಸೋಮೇಶ್ವರ ಜಗದ್ಗುರು ರೇಣುಕ ಯಾತ್ರಿ ನಿವಾಸದ ಮೇಲಂತಸ್ತಿನ ಕಟ್ಟಡ ಆದಷ್ಟು ಬೇಗ ಪೂರ್ಣಗೊಳ್ಳಬೇಕಾಗಿದೆ. ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ಭಕ್ತರು ಸಹಕರಿಸಬೇಕೆಂದರು.
ಈ ಅಪೂರ್ವ ಸಮಾರಂಭದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಚಂದ್ರಜ್ಞಾನಾಗಮ ಕೃತಿಯನ್ನು ಮತ್ತು ಉರವಕೊಂಡ ಕರಿಬಸವ ರಾಜೇಂದ್ರ ಸ್ವಾಮಿಗಳು ಇಷ್ಟಲಿಂಗಂ ತೆಲುಗು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಹಂಪಿ ಸಾವಿರದೇವರ ಮಠದ ಶ್ರೀಗಳು, ಸ್ಟೇಷನ್ ಬಬಲಾದ ಶಿವಮೂರ್ತಿ ಶ್ರೀಗಳು, ಹಂಪಸಾಗರ ಶಿವಲಿಂಗ ರುದ್ರಮುನಿ ಶ್ರೀಗಳು, ಪಾತರಿ ಕಾಶಿನಾಥ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು, ಮಳಲಿ ಡಾ. ನಾಗಭೂಷಣ ಶ್ರೀಗಳು, ಕಡಕೋಳ ರುದ್ರಮುನಿ ಶ್ರೀಗಳು, ಶಿರಿಸ್ಯಾಡ ಮುರುಘೇಂದ್ರ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ವೆಂಕಟಬೆನ್ನೂರು, ಸಿಂದಗಿ, ಹಣಮಾಪುರ, ಮುಳವಾಡ, ಗುಡ್ಡಾಪುರ, ರಾಯಚೂರು, ಶಾಂತಪುರ, ತಡವಲಗಾ, ಚಳಗೇರಿ, ಹರಸೂರು, ಮಳಖೇಡ, ಸೇಡಂ, ತೊನಸನಹಳ್ಳಿ, ಮುದ್ದಡಗ, ದೋರನಳ್ಳಿ, ಸಂಗೊಳ್ಳಿ, ಮೂಲಾಧಾರ ಹಿರೇಮಠ ಮಳಖೇಡ, ಹರಪನಹಳ್ಳಿ, ಹರಗಿನದೋಣಿ, ಮದ್ದರಕಿ, ಇಂಚಗೇರಿ, ಬಾರ್ಸಿ, ಕಡೇನಂದಿಹಳ್ಳಿ, ಹಾರನಹಳ್ಳಿ, ಕಾರ್ಜುವಳ್ಳಿ ಮೊದಲಾದ 37 ಜನ ಶಿವಾಚಾರ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ ಬಿರಾದಾರ, ಕೋಶಾಧಿಕಾರಿ ಶಿವಶರಣಪ್ಪ ಸೀರಿ, ಸದಸ್ಯರಾದ ಅಮೃತಪ್ಪ ಮಲಕಪ್ಪಗೌಡ, ಗುರಪಾದಪ್ಪ ಕಿಣಗಿ, ಬೀರೂರು ಶಿವಸ್ವಾಮಿ, ಆರ್.ಆರ್.ಹಿರೇಮಠ, ಚಂದ್ರಶೇಖರ ನಾಗರಾಳಮಠ, ನಂದೀಶ, ಉದಯ, ಚಂದ್ರಶೇಖರ ಲಿಂಗಸುಗೂರ, ಬಾರ್ಸಿ ಅರುಣ ಹಿರೇಮಠ ಮೊದಲಾದ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತರು. ಪೂಜಾ ಸಮಿತಿ ಮುಖ್ಯಸ್ಥ ಮೇಹಕರ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲಮೇಲ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಬಳಗದವರು ಅನ್ನ ದಾಸೋಹ ನೆರವೇರಿಸಿದರು.
ಬೆಳಿಗ್ಗೆ ಶ್ರೀ ಸ್ವಯಂಭು ಸೋಮೇಶ್ವರ ಮಹಾಲಿಂಗಕ್ಕೆ ಅಭಿಷೇಕ ಮತ್ತು ಶಕ್ತಿಮಾತೆ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಶ್ರೀ ವೀರಭದ್ರಸ್ವಾಮಿಗೆ ಪೂಜೆ ನೆರವೇರಿಸಿ 67 ನಂದಾ ದೀಪಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬೆಳಗಿಸಿದರು.