ಮೌಲಾನಾ ಅಬುಲ್ ಕಲಾಂ ಅಜಾದ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ : ಅಸ್ಲಮ್ ನಾಲಬಂದ

ಅಥಣಿ : ನ.13:ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಟಗಾರರಾಗಿ, ಕೇಂದ್ರ ಸರ್ಕಾರದಲ್ಲಿ ಮೊದಲ ಶಿಕ್ಷಣ ಮಂತ್ರಿಗಳಾಗಿ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹಾ ವ್ಯಕ್ತಿಗಳಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಒಬ್ಬರು. ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಸ್ಲಂ ನಾಲಬಂದ ಹೇಳಿದರು.
ಅವರು ಪಟ್ಟಣದ ಅಜಾದ್ ವೃತ್ತದಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಇವರು ಹಿಂದೂ-ಮುಸ್ಲಿಂ ಭಾವೈಕ್ಯತೆಯಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಲು ಪ್ರೇರೇಪಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿ ಮತ್ತು ಸ್ವತಂತ್ರ ಭಾರತದ ನಂತರ ನೆಹರು ಅವರ ಮಂತ್ರಿಮಂಡಲದಲ್ಲಿ ಕೇಂದ್ರ ಸರ್ಕಾರದ ಮೊದಲ ಶಿಕ್ಷಣ ಮಂತ್ರಿಗಳಾಗಿ ಪ್ರತಿಯೊಂದು ಮಗುವಿಗೆ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರೆಯಬೇಕೆಂಬ ನೀತಿಯನ್ನು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಅನೇಕ ಬಾರಿ ಜೈಲುವಾಸ ಅನುಭವಿಸಿದ ಅವರು ಪತ್ರಿಕೆಗಳ ಮೂಲಕ ಅನೇಕ ಲೇಖನಗಳನ್ನು ಬರೆಯುತ್ತಿದ್ದರು. ಅವರ ಶಿಕ್ಷಣ ಪ್ರೇಮ ಮತ್ತು ದೇಶಾಭಿಮಾನವನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವುದು ಅಗತ್ಯವಿದೆ ಎಂದು ಹೇಳಿದರು.
ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ್ ಸಿಂಗೆ ಮಾತನಾಡಿ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಭಾರತ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು. ಪಶ್ಚಿಮ ಬಂಗಾಳದಲ್ಲಿ ಅನೇಕ ಕ್ರಾಂತಿಕಾರಿ ಹೋರಾಟಗಳನ್ನು ಮಾಡುವ ಮೂಲಕ ದೇಶದ ಸ್ವತಂತ್ರಕ್ಕಾಗಿ ಹಿಂದೂ ಮುಸ್ಲಿಮರನ್ನು ಒಗ್ಗೂಡಿಸಿ ಬ್ರಿಟಿಷ್ ಸರಕಾರದ ವಿರುದ್ಧ ಸಮರ ಸಾರಿದರು. ಸ್ವತಂತ್ರದ ನಂತರ ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ಮಂತ್ರಿಮಂಡಲದಲ್ಲಿ ಮೊದಲ ಶಿಕ್ಷಣ ಮಂತ್ರಿಗಳಾಗಿ ಅನೇಕ ಶೈಕ್ಷಣಿಕ ಸುಧಾರಣೆಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಂದು ಆಚರಿಸಲಾಗುತ್ತದೆ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರಿಂದ ಅಜಾದ್ ಎಂಬ ಅಂಕಿತನಾಮ ಬಂದಿದೆ. ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವಲ್ಲಿ ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು-ನೀವೆಲ್ಲರೂ ನಡೆಯೋಣ ಎಂದು ಹೇಳಿದರು.

ಈ ವೇಳೆ ಮೌಲಾನಾ ಅಬ್ಬಾಸ್, ಮೌಲಾನ ಹಬೀಬುಲ್ಲಾ, ಮುಖಂಡರಾದ ಅಮಾನುಲ್ಲಾ ಜಮಾದಾರ್, ಅಬುಬುಕರ್ ಕೊಕಟನೂರ, ಅಯಾಜ್ ಮಾಸ್ಟರ್, ಶಬ್ಬೀರ್ ಸಾತಬಚ್ಚೆ, ಹಮ್ಜ ಅಲಿ ಜಮಖಂಡಿ, ಮಹಮದ್ ಅಜರ್ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.