ಮೌನೇಶಗೆ ಕರ್ನಾಟಕ ತಂಡದಲ್ಲಿ ಸ್ಥಾನ

ಬ್ಯಾಡಗಿ, ಮಾ 21 : ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಯ ಉದಯೋನ್ಮುಖ ಕ್ರೀಡಾಪಟು ಮೌನೇಶ್ ಕಮ್ಮಾರ, ರಾಷ್ಟ್ರಮಟ್ಟದ ಜ್ಯೂನಿಯರ್ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಕರ್ನಾಟಕದ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ.

ತೆಲಂಗಾಣದ ಸರಯಂಪೇಟ್‍ನಲ್ಲಿ ಮಾ.22 ರಿಂದ 25ರವರೆಗೆ ನಡೆಯಲಿರುವ 47ನೇ ರಾಷ್ಟ್ರೀಯ ಜ್ಯೂನಿಯರ್ ಬಾಲಕ-ಬಾಲಕಿಯರ ಚಾಂಪಿಯನ್‍ಶಿಪ್ ಹಿನ್ನೆಲೆಯಲ್ಲಿ ಕಳೆದ ಮಾ.9 ರಿಂದ ಕೋಲಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಕಬಡ್ಡಿ ಅಸೋಸಿಯೇಶನ್ ಆಯೋಜಿಸಿದ್ದ 11 ದಿನಗಳ ತರಬೇತಿ ಶಿಬಿರಕ್ಕೆ ಜಿಲ್ಲೆಯಿಂದ ಏಕೈಕ ಆಟಗಾರನಾಗಿ ಮೌನೇಶ್ ಆಯ್ಕೆಯಾಗಿದ್ದ. ಪಟ್ಟಣದ ಬಿಇಎಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ.ವ್ಯಾಸಂಗ ಮಾಡುತ್ತಿರುವ ಮೌನೇಶ್ ಲೆಫ್ಟ್ರೈಡರ್ ಮತ್ತು ರೈಟ್‍ಥರ್ಡ ಆಟವಾಡುತ್ತಿದ್ದು ಎರಡೂ ವಿಭಾಗದಲ್ಲಿ, ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಕರ್ನಾಟಕ ತಂಡದ ಅಂತಿಮ 12ರಲ್ಲಿ ಸ್ಥಾನ ಗಿಟ್ಟಿಸಿದ್ದಾನೆ.

ಮೌನೇಶ್ ಕಮ್ಮಾರ ಸಾಧನೆಗೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಮಂಜಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಹಾಗೂ ಸದಸ್ಯರು, ಜಿಲ್ಲಾ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಮತ್ತು ಸದಸ್ಯರು, ಕೋಚ್ ಮಂಜುಳ ಭಜಂತ್ರಿ ಸೇರಿದಂತೆ ಬಿಇಎಸ್ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.