ಮೌಢ್ಯತೆ ಅಳಿಯಲಿ; ವಿಜ್ಞಾನ ಬೆಳಗಲಿ: ಬಿ.ಆರ್. ಪಾಟೀಲ

ಕಲಬುರಗಿ:ನ.25: ಮೌಢ್ಯತೆ ಅಳಿಯುವ ಕಾರ್ಯ ವಿಧಾನಸೌಧದಿಂದಲೇ ಆರಂಭವಾಗಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.

ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವನ್ನು ಮೌಢ್ಯಮುಕ್ತ ಮಾಡಲು ಇಂತಹ ಸಂಘಟನೆಗಳ ಅಗತ್ಯವಿದ್ದು, ಇದು ಉತ್ತಮ ಬೆಳವಣಿಗೆ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು. ಇಂತಹ ಮೌಢ್ಯ ಆಚರಣೆಗಳಿಂದ ಮುಜುಗರವೆನಿಸುತ್ತಿದ್ದರೂ ಸಹಿಸಿಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಮಾತನಾಡಿ, ಪ್ರತಿಯೊಬ್ಬರು ತಮ್ಮಲ್ಲಿರುವ ಅಜ್ಞಾನ, ಮೂಢನಂಬಿಕೆ, ಅಂದಶ್ರದ್ಧೆ, ಅಂಧಾಕಾರ ತೊಲಗಿಸಿ, ‘ಮನುಧರ್ಮಕ್ಕಿಂತ ಮನೋಧರ್ಮ’ ಬೆಳೆಸಿಕೊಂಡು ಉತ್ತಮ ಬದುಕು ಮುನ್ನಡೆಸಬೇಕು ಎಂದು

ಮಕ್ಕಳಲ್ಲಿ ವೈಚಾರಿಕತೆ ಚಿಂತಿಸುವ ಸಾಮಾರ್ಥ್ಯ ಬೆಳೆಸಬೇಕು. ಈ ದಿಸೆಯಲ್ಲಿ ಮೊಬೈಲ್, ಟಿವಿ ಮತ್ತಿತರರ ಗೀಳಿನಿಂದ ದೂರ ಇರಬೇಕು. ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು ಎಂದರು.

ಭಯ ಯಾವಾಗ ಸೃಷ್ಟಿ ಆಯಿತ್ತೋ ಅಲ್ಲಿಂದಲೇ ದೇವಾನು ದೇವತೆಗಳು ಸೃಷ್ಟಿಯಾದರು. ಆದರೆ ಯಾರಿಗೂ ದೇವರು ಅನ್ಯಾಯ ಮಾಡಲ್ಲ. ಹೀಗಾಗಿ, ವಿಜ್ಞಾನ ನಿಂತ ನೀರಲ್ಲ, ಚಲಿಸುವ ನೀರಾಗಿದೆ. ಪಂಜಾಂಗಕ್ಕೆ ಮಹತ್ವ ನೀಡದೆ ಪಂಚ ಅಂಗಕ್ಕೆ ಪ್ರಾಮುಖ್ಯತೆ ನೀಡಿದ್ದಾಗ ಮಾನಸಿಕ, ದೈಹಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ಬಣ್ಣಿಸಿದರು.

ಅತಿಥಿಯಾಗಿದ್ದ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ ಆರೋಗ್ಯಕರ ಸಮಾಜ ಕಟ್ಟಬೇಕು ಎಂಬ ಹಿನ್ನೆಲೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಗಾಳಿ, ನೀರು, ಬೆಳಕು ಎಷ್ಟು ಮುಖ್ಯವೋ ಬದುಕಿಗೆ ಬುದ್ದ, ಬಸವ, ಅಂಬೇಡ್ಕರ್ ತತ್ವಾದರ್ಶಗಳು ದಾರಿದೀಪವಾಗಿವೆ. ಹೀಗಾಗಿ ನಮಗೆ ರಾಮರಾಜ್ಯ ಬದಲು ಬಸವರಾಜ್ಯ, ಕಲ್ಯಾಣರಾಜ್ಯ ಕನಸು ನನಸಾಗಬೇಕಿದೆ. ಜೀವನದಲ್ಲಿ ಯಾವುದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂದು ತಿಳಿಸಿದರು.

ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ ಸಂಸ್ಥಾಪಕ ಕಾರ್ಯದರ್ಶಿ ಡಾ. ಮಾರುತಿರಾವ್ ಡಿ ಮಾಲೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉಸ್ತುರಿ, ಧುತ್ತರಗಿ ಶ್ರೀಮಠದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಪರಿಷತ್ತಿನ ರಾಜ್ಯ ಉಪಾಧ್ಯಕ್ಷೆ ಇಂದುಮತಿ ಸಾಲಿಮಠ ಮಾತನಾಡಿದರು.

ವೇದಿಕೆ ಮೇಲೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಾನಿ ಬಾಬುರಾವ್, ರಾಜ್ಯ ನಿರ್ದೇಶಕರುಗಳಾದ ರೇಣುಕಾ ಸಿಂಗೆ, ಶರಣಬಸವ ಕಲ್ಲಾ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಡಾ. ಶಾಂತಾ ಅಷ್ಟಿಗೆ ಇದ್ದರು. ಪದಾಧಿಕಾರಿಗಳಾದ ನೀಲಕಂಠ ಆವಂಟಿ, ಡಾ. ಬಸವರಾಜ್ ಚಟ್ನಳ್ಳಿ, ಹಣಮಂತರಾಯ ಐನೂಲಿ, ಡಾ. ಅಶೋಕ ದೊಡ್ಮನಿ, ಸತೀಶ ಸಜ್ಜನ, ಸಂತೋಷ ಹೂಗಾರ, ಬಸವರಾಜ ಕಲ್ಲಾ, ಅಯ್ಯಣ್ಣ ನಂದಿ, ಸಿದ್ದರಾಮ ರಾಜಮಾನೆ, ಸಂಗಣ್ಣ ಜಿ. ಸತ್ಯಂಪೇಟೆ, ಆರ್.ಕೆ. ಹುಡುಗಿ, ವಿನೋದಕುಮಾರ ಜನೆವರಿ, ಮಡಿವಾಳಪ್ಪ ನಾಗರಹಳ್ಳಿ, ಬಾಬುರಾವ ಕೋಬಾಳ, ನಾಗಣ್ಣಗೌಡ, ರಮೇಶ ಧುತ್ತರಗಿ ಮತ್ತಿತರರಿದ್ದರು. ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿದರು. ಪರಮೇಶ್ವರ ಶೆಟಕಾರ್ ನಿರೂಪಿಸಿದರು. ಶಿವರಾಜ್ ಅಂಡಗಿ ವಂದಿಸಿದರು.

ನಂತರ ಅರಿಷಿಣ ಲಿಂಬೆಕಾಯಿ ಮಾಯ ಮಾಡುವುದು, ಖಾಲಿ ಕೊಡದಿಂದ ನೀರು ಹಾಗೂ ಖಾಲಿ ಚೆಂಬುವಿನಿಂದ ಹೂ ತರಿಸುವುದು ಹೀಗೆ ಹತ್ತಾರು ಪವಾಡ, ಬಾನಾಮತಿ ವಿಷಯಗಳ ಬಗ್ಗೆ ಜಾಗೃತಿಗೊಳಿಸಿದರು. ಇದೇ ಸಂದರ್ಭದಲ್ಲಿ ಪುಟ್ಟ ಬಾಲಕ ಪ್ರಣವ ಶಿವರಂಜನ್ ಸತ್ಯಂಪೇಟೆ ಮಾಡಿದ ಹಿಂದಿ ಭಾಷಣ ಜನಮನ ಸೆಳೆಯಿತು