
ವಾಡಿ:ಮಾ.16: ಮೌಢ್ಯಾಚರಣೆಯಿಂದ ಕೂಡಿರುವ ಸಮಾಜವನ್ನು ಸರಿ ದಿಕ್ಕೆನೆಡೆಗೆ ತರಲು ವೈಚಾರಿಕ ಸಾಹಿತ್ಯ ಕೃಷಿಯ ಅಗತ್ಯವಿದೆ ಎಂದು ಸಂಚಲನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ದಯಾನಂದ ಖಜೂರಿ ಹೇಳಿದರು.
ಪಟ್ಟಣದ ಮಾತೆ ಮಾಣಿಕೇಶ್ವರಿ ಭವನದಲ್ಲಿ ಏರ್ಪಡಿಸಲಾಗಿದ್ದ ಸಂಚಲನ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕೈಗಾರಿಕಾ ಜಿಲ್ಲೆಯಲ್ಲಿ ಕಾರ್ಮಿಕರ ಬದುಕು ಅಸಹನೀಯವಾಗಿದೆ. ಯುವಜನರು ನಿರುದ್ಯೋಗ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಮೌಢ್ಯಾಚಾರಣೆ ಇನ್ನೂ ಜೀವಂತವಾಗಿದ್ದು, ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. ಬರಹ ಲೋಕವನ್ನು ಪ್ರವೇಶಿಸಿರುವ ಸಾಹಿತ್ಯ ಮನಸ್ಸುಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ವಿಫಲವಾಗುತ್ತಿವೆ. ಪರಿಣಾಮ ಜನರ ನೋವಿಗೆ ಮಿಡಿಯುವ ಸಾಹಿತ್ಯ ರಚನೆಗೆ ಬರ ಉಂಟಾಗುತ್ತಿದೆ. ಇತರ ಸಾಹಿತ್ಯ ವೇದಿಕೆಗಳಿಗೆ ಮಾದರಿಯಾಗುವಂತೆ ಸಂಚಲನ ಸಾಹಿತ್ಯ ವೇದಿಕೆ ಪ್ರಗತಿದಾಯಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಮಾತನಾಡಿ, ಕಲ್ಲು ಗಣಿಗಳ ಪ್ರದೇಶದಲ್ಲಿ ಸಾಹಿತ್ಯ ಅಭಿರುಚಿ ಹೊಂದಿದವರ ಕೊರತೆಯಿದೆ. ಬರಹಗಾರರಿಗೆ ಸ್ಪೂರ್ತಿ ಹಾಗೂ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. ವೈಚಾರಿಕ ಸಂವಾದ, ಕವಿಗೋಷ್ಠಿ, ಲೇಖನ ಸ್ಪರ್ಧೆ, ಪುಸ್ತಕ ಓದು, ವಿಮರ್ಶೆ, ಪ್ರಚಲಿತ ವಿಧ್ಯಮಾನಗಳ ಕುರಿತು ಬರಹ, ಹೀಗೆ ಸಮಾಜವನ್ನು ಮುನ್ನೆಡೆಸುವ ಹಾಗೂ ಯುವ ಬರಹಗಾರರನ್ನು ಸೃಷ್ಠಿಸುವ ದಿಕ್ಕಿನೆಡೆಗೆ ಸಂಚಲನ ವೇದಿಕೆ ಸಾಗುತ್ತಿದೆ ಎಂದರು.
ವೇದಿಕೆಯ ಸಿದ್ದಯ್ಯಶಾಸ್ತ್ರೀ ನಂದೂರಮಠ, ದೇವಿಂದ್ರ ಕರದಳ್ಳಿ, ಚಂದ್ರು ಕರಣಿಕ, ರವಿ ಕೋಳಕೂರ, ಮಲಿಕಪಾಶಾ ಮೌಜನ್, ಮಲ್ಲೇಶ ನಾಟೀಕಾರ, ಸುನೀಲ ರಾಠೋಡ, ಶ್ರವಣಕುಮಾರ ಮೊಸಲಗಿ, ಖೇಮಲಿಂಗ ಬೆಳಮಗಿ, ರಘವೀರ ಪವಾರ, ರಾಯಪ್ಪ ಕೊಟಗಾರ, ಯಶ್ವಂತ ಧನ್ನೇಕರ, ವಿಜಯಕುಮಾರ ಯಲಸತ್ತಿ, ಶ್ರೀಕಾಂತ, ಗುರುಪ್ರಸಾದ ಪಾಲ್ಗೊಂಡಿದ್ದರು.