ಮೌಡ್ಯ,ಶೋಷಣೆಗೆ ಅಂಬೇಡ್ಕರ್‌ರಿಂದ ಮುಕ್ತಿ

ಕೋಲಾರ.ಏ.೧೯:ಸ್ವತಂತ್ರ ಪೂರ್ವದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದ್ದು, ಮಹಿಳೆಯರು ಬಾಲ್ಯದಲ್ಲಿಯೇ ವಿದವಾ ವೈರಾಗ್ಯವನ್ನು ಎದುರಿಸಬೇಕಾಗಿತ್ತು. ಅವರವರ ಮೂಗಿನ ನೇರಕ್ಕೆ ಮಹಿಳೆಯರನ್ನು ಮೂಡನಂಬಿಕೆಯಲ್ಲಿ ನೂಕಿ ಕಷ್ಟಕರ ಜೀವನ ನಡೆಸುವ ಕಾಲದಲ್ಲಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಜಿ.ಶಿವಪ್ಪ ಅರಿವು ತಿಳಿಸಿದರು.
ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಲಾರ, ಗಮನ ಮಹಿಳಾ ಸಮೂಹ, ಯಂಗ್ ಇಂಡಿಯಾ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಸ್ವರ್ಣ ಭೂಮಿ ಫಂಡೇಷನ್ ರವರುಗಳ ಸಹಯೋದಲ್ಲಿ ಕೋಲಾರ ನಗರದ ಹಾರೋಹಳ್ಳಿಯ ಗಮನ ಮಹಿಳಾ ಸಮೂಹ ಕಛೇರಿಯಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಯುವಕ / ಯುವತಿಯರಿಗೆ ಥಟ್ಟನೆ ಹೇಳಿ ಉತ್ತರ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಬಹಳಷ್ಟು ಬರವಣಿಗೆಗಳು ದಲಿತರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೇಳಿರುವುದಿಲ್ಲ. ಈ ಹಿಂದೆ ಇದ್ದ ದಲಿತರು ಈಗಿನ ಬಹುತೇಕ ಮುಸ್ಲೀಮರಾಗಿದ್ದಾರೆ. ಕಾರಣ ಹಿಂದೂ ಧರ್ಮದಲ್ಲಿ ದಲಿತರು ಮೌಡ್ಯ ಮತ್ತು ಶೋಷಣೆಗೆ ಬೇಸತ್ತು ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಆಗಿನ ಕಾಲಕ್ಕೆ ವೃತ್ತಿ ಆದಾರದ ಮೇಲೆ ಜಾತಿ ನಿರ್ಮಾಣಗೊಂಡಿದ್ದು, ಭಾರತದೇಶದಲ್ಲಿಯೇ ಅಲ್ಲದೆ ಬಾಂಗ್ಲ, ಬರ್ಮ, ಪಾಕಿಸ್ಥಾನಗಳಲ್ಲಿಯೂ ಸಹ ದಲಿತರಿದ್ದಾರೆ. ಇತಿಹಾಸದಲ್ಲಿ ನೂರಕ್ಕೆ ಒಂದು ಭಾಗ ದಲಿತರ ಇತಿಹಾಸ ಉಳಿದಿದ್ದು, ಉಳಿದ ೯೯ ಭಾಗ ಇತಿಹಾಸದಲ್ಲಿ ಮರೆಯಾಗಿದೆ ಎಂದರು.
ಅಂಬೇಡ್ಕರ್ ರವರು ಬರೆದಿರುವ ಬುದ್ಧ ಮತ್ತು ಧಮ್ಮ ಪುಸ್ತಕವನ್ನು ಓದಿದರೆ ಜಾತಿಯ ವಿನಾಶ ಹೇಗೆ ಆಗಿದೆ ಎಂಬುದು ತಿಳಿದು ಬರುತ್ತದೆ. ಮಹಿಳೆಯರ ಸಮಾನತೆಯ ಹಕ್ಕಿಗಾಗಿ ಬಹಳಷ್ಟು ಹೋರಾಟಗಳನ್ನು ಮಾಡಿದ್ದಾರೆ. ಸತಿ ಸಹಗಮನಪದ್ದತಿಯನ್ನು ವಿರೋಧಿಸಿದ್ದರು ಅಂಬೇಡ್ಕರ್ರನ್ನು ಓದಿಕೊಂಡರೆ ಮಾನವೀಯತೆಯನ್ನು ಓದಿದ ಹಾಗೆ. ಯಾವುದೇ ವಿಷಯಗಳನ್ನು ಅವರು ಊಹೆ ಮಾಡಿ ಬರೆದಿರುವುದಲ್ಲ. ಅವರ ಬರಹಗಳು ಅನುಭವ ಮತ್ತು ಸುಧೀರ್ಘ ಅಧ್ಯನದಿಂದ ಕೂಡಿರುತ್ತದೆ ಎಂದರು.
ಹಿರಿಯ ದಲಿತ ಮುಖಂಡ ನರಸಾಪುರ ಎಸ್.ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶದ ಯುವಕ ಯುವತಿಯರು ತಾರತಮ್ಯವಿಲ್ಲದೆ ಬದುಕಬೇಕು. ಸಾವಿತ್ರಿ ಬಾಪುಲೆಯಂತಹ ಮಹಾತಾಯಿ ಈ ದೇಶದಲ್ಲಿ ಜನಿಸದೇ ಹೋಗಿದ್ದರೆ ಮಹಿಳೆಯರು ಹಾಗೂ ದೀನ, ದಲಿತ, ಹಿಂದುಳಿದ ವರ್ಗಗಳು ವಿದ್ಯೆಯಿಂದ ವಂಚಿತಾರುತ್ತಿದ್ದರು. ಜ್ಯೋತಿ ಬಾ ಪುಲೆರವರು ಸತ್ಯಶೋಧಕ ಸ್ಥಾಪನೆಮಾಡಿ ವಿಧವೆಯರಿಗೆ ಮರುವಿವಾಹಗಳನ್ನು ಮಾಡಿ ಮೌಢ್ಯತೆಯ ವಿರುದ್ಧ ಸಮರ ಸಾರಿದವರು. ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ ಮತ್ತಿತರ ವಚನಕಾರರು ಸಮಾನತೆಯನ್ನು ಎತ್ತಿ ಹಿಡಿದಿದ್ದಾರೆ. ನೂರು ದೇವರುಗಳ ನೂಕಾಚೆ ದೂರ ಮನುಜ ಮತಕ್ಕೆ ನೀ ಬಾರ ಎಂದು ಯುವಕರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗಮನ ಶಾಂತಮ್ಮ, ಹೂಹಳ್ಳಿ ನಾಗರಾಜ್, ಈನೆಲ ಈಜಲ ವೆಂಕಟಾಚಲಪತಿ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಗಮನ ಲಕ್ಷ್ಮಿ, ಸೌಕ್ಯ ಸಮೃದ್ಧಿ ಸಂಸ್ಥೆಯ ರುದ್ರೇಶ್, ಗಮನ ಸಂಧ್ಯ ಮುಂತಾದವರು ಭಾಗವಹಿಸಿದ್ದರು.