ಬೆಂಗಳೂರು,ಮಾ.೨೬;ರಾಜ್ಯದ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಜನರಿಗೆ ವಂಚನೆ ಮಾಡುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸುಳಿಗೆ ಸಿಲುಕುವುದನ್ನು ಅರಿತು ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ, ವಂಚನೆ, ಮೋಸ ಮಾಡುವ ರಣನೀತಿ ರೂಪಿಸಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರುಗಳು ಲಿಂಗಾಯತರು, ಒಕ್ಕಲಿಗರು , ಪರಿಶಿಷ್ಟ ಜಾತಿ ಪಂಗಡ ಅಲ್ಪ ಸಂಖ್ಯಾತರಿಗೆ ಮೋಸ ಮಾಡಲು ಈ ಮೀಸಲಾತಿ ತಂತ್ರಗಾರಿಕೆಯಾಗಿದೆ ಎಂದು ದೂರಿದರು.ಸ್ವತಂತ್ರ ಭಾರತದ ೭೫ ವರ್ಷ ಇತಿಹಾಸದಲ್ಲಿ ಎಂದಿಗೂ ರಾಜ್ಯಸರ್ಕಾರ ೯೦ ದಿನಗಳ ಅವಧಿಯಲ್ಲಿ ಮೀಸಲಾತಿ ವರ್ಗೀಕರಣವನ್ನು ೩ ಬಾರಿ ಬದಲಾವಣೆ ಮಾಡಿರಲಿಲ್ಲ. ಈ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನೂ ವಂಚಿಸಿ, ಎಲ್ಲರನ್ನು ಒಡೆದು ಸಮುದಾಯಗಳನ್ನು ಪರಸ್ಪರ ಎತ್ತಿ ಕಟ್ಟುವ ಪ್ರಯತ್ನ ಮಾಡಿದೆ ಎಂದು ಇವರುಗಳು ವಾಗ್ದಾಳಿ ನಡೆಸಿದರು.
ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದಲೂಟಿ ಹಗರಣ ಮರೆಯುವಂತೆ ಮಾಡಿ ೪೦ ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಕಳಂಕದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಇವರುಗಳು ದೂರಿದರು.ರಾಜ್ಯದಲ್ಲಿರುವ ಬಿಜೆಪಿ ಪಕ್ಷ ಈಗ ಬಿಟ್ರೆಯಲ್ ಜನತಾ ಪಾರ್ಟಿ ಎಂದು ಇವರುಗಳು ವ್ಯಂಗ್ಯವಾಡಿ ಈಗ ಮಾಡಿರುವ ವರ್ಗೀಕರಣವನ್ನು ಯಾವ ವರದಿಯ ಆಧಾರದ ಮೇಲೆ ಮಾಡಿದ್ದಾರೆ. ಇದು ಬಹಿರಂಗವಾಗಬೇಕು ಎಂದರು.ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯಸರ್ಕಾರದ ಈ ತೀರ್ಮಾನವನ್ನು ರದ್ದು ಮಾಡಿ ಮುಂದೆ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.
ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿಯಲ್ಲಿ ಮಧ್ಯಂತರ ವರದಿ ಆಧಾರದ ಮೇಲೆ ನೀಡಿದ ಮೀಸಲಾತಿ ಕುರಿತು ಏನು ತೀರ್ಪುಗಳು ಬಂದಿದೆ ಎಂಬುದನ್ನು ಸರ್ಕಾರ ಗಮನಿಸಿದೆಯೇ ೩-೪ ಜನ ಕುಳಿತು ಮೀಸಲಾತಿ ತೀರ್ಮಾನ ಮಡುವುದು ಸರಿಯಲ್ಲ ಈ ಮೀಸಲಾತಿ ಹಂಚಿಕೆಯನ್ನು ಯಾವ ವರದಿಯಾಧಾರದ ಮೇಲೆ ಅಂಕಿ ಅಂಶ ವರದಿ ಮಾಡಲಾಗಿದೆ ಎಂಬುದು ಬಹಿರಂಗವಾಗಬೇಕು ಎಂದರು.ಮೀಸಲಾತಿ ಸಂಬಂಧ ಸ್ವಾಮೀಜಿಗಳಿಗೆ ಬೆದರಿಕೆ ಹಾಕಲಾಗುತ್ತದೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಇವರುಗಳು ಮೃತ್ಯುಂಜಯ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ೨೦ ಸಲ ಕರೆ ಮಾಡಿ ಇದನ್ನು ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಹೇಳಿದರು.
ಮೀಸಲಾತಿ ಕಸಿದು ಲಿಂಗಾಯತ ಮುಖಂಡರಿಗೆ ಹಂಚಿರುವುದನ್ನು ಈ ಸಮುದಾಯವವರು ಒಪ್ಪುವುದಿಲ್ಲ. ಈ ಸಮುದಾಯದವರು ನಮ್ಮ ಜನರಲ್ಲವೇ, ಬಿಜೆಪಿಯವರು ಅಧಿಕಾರ ಸ್ವೀಕಾರ ಮಾಡುವಾಗ ಏನೆಂದು ಪ್ರಮಾಣವಚನ ಸ್ವೀಕರಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.
ಹಿಂದುಳಿದವರು, ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು ಇವರ್‍ಯರು ಭಿಕ್ಷಕರಲ್ಲ ಪ್ರತಿಯೊಬ್ಬರು ಹಕ್ಕು ಕೇಳುತ್ತಿದ್ದಾರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನೀಡಬೇಕು ಎಂಬ ಹಕ್ಕನ್ನು ಈ ಸಮುದಾಯಗಳು ಇಟ್ಟಿವೆ ಎಂದರು.