ಮೋಸದಿಂದ ಚಿತ್ರದುರ್ಗ ಕೋಟೆ ವಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.19: ಚಿತ್ರದುರ್ಗದ ಸೈನ್ಯದಲ್ಲಿದ್ದ ಮುಸ್ಲಿಂ ಅಧಿಕಾರಿಗಳಿಗೆ, ಹೈದರಾಲಿಯು ಆಮಿಷ ಒಡ್ಡಿ ತನ್ನತ್ತ ಸೆಳೆದು,ಕೋಟೆಯ ರಹಸ್ಯ ಮಾರ್ಗದ ಮೂಲಕ  1779 ರಲ್ಲಿ ಒಳನುಗ್ಗಿ ಮದಕರಿ ನಾಯಕನನ್ನು ಸೋಲಿಸಿ,ಸೆರೆಹಿಡಿದು ಶ್ರೀರಂಗಪಟ್ಟಣದಲ್ಲಿ ವಿಷಕೊಟ್ಟು ಸಾಯಿಸಿದರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಜಾ ವೀರಮದಕರಿ ನಾಯಕ ಅವರ 281ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ ಅಂದು ಆಳ್ವಿಕೆಯಲ್ಲಿದ್ದ 77 ಪಾಳೆ ಪಟ್ಟುಗಳಿಗೆ ಮದಕರಿ ನಾಯಕನವರೇ ಮುಖ್ಯಸ್ಥರಾಗಿದ್ದರು.ಆದ್ದರಿಂದ ಅವರನ್ನು ದುರ್ಗದ ಹುಲಿ ಎಂದು ಕರೆಯುತ್ತಾರೆ.
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಹಾಗೂ ಒಣಕೆ ಓಬವ್ವ ಅವರ ಕಿಂಡಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ತಪ್ಪದೇ ನೋಡಬೇಕೆಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಂಥಾಲಯದ ಗ್ರಂಥಪಾಲಕ ಕೆ.ಸಿದ್ದಪ್ಪ, ಶಿಕ್ಷಕರಾದ ಸುಂಕಪ್ಪ,ಗುರುಪ್ರಸಾದ್, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ, ಆಶಾ ಕಾರ್ಯಕರ್ತೆಯರಾದ ಯಶೋಧ, ಸುಶೀಲಾ ಮುಂತಾದವರು ಉಪಸ್ಥಿತರಿದ್ದರು.