ನವದೆಹಲಿ,ಜು.೨೮-ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಉಂಟಾದ ಮಾತಿನ ಚಕಮಕಿ ಕೋಲಾಹಲದಿಂದ ಸಂಸತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಪ್ರಧಾನಿ ಹೇಳಿಕೆ ನೀಡುವಂತೆ ಆಗ್ರಹಿಸಿ ಸದನದ ಬಾವಿಗಳಿದು ಧರಣಿ ನಡೆಸಿ ಗದ್ದಲ ಸೃಷ್ಟಿಸಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಲೋಕಸಭಾದ್ಯಕ್ಷರು ಮದ್ಯಾಹ್ನ ೧೨ ಗಂಟೆಗೆ ಮುಂದೂಡಿದರು. ಮತ್ತೆ ಸದನ ಆರಂಭವಾದಾಗಲೂ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಕಲಾಪ ಮುಂದೂದಲಾಯಿತು.ರಾಜ್ಯಸಭೆಯಲ್ಲಿ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರತಿಪಕ್ಷಗಳ ಗಲಾಟೆ ಹಿನ್ನೆಯಲ್ಲಿ ಕಲಾಪ ಆರಂಭವಾ ಕೆಲ ನಿಮಿಷಗಳಲ್ಲಿ ಸಭಾಪತಿ ಜಗದೀಪ್ ಧನಕರ್ ಸೋಮವಾರಕ್ಕೆ ಮುಂದೂಡಿದರು.
ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ “ನಾ ಕೊಡೆ ನೀ ಬಿಡೆ ಎನ್ನುವಂತೆ” ಹಗ್ಗ ಜಗ್ಗಾಟ ಮುಂದುವರಿದಿದೆ. ಕಳೆದೊಂದು ವಾರದಿಂದ ಪ್ರತಿಪಕ್ಷಗಳು ಪ್ರಧಾನಿ ಹೇಳಿಕೆ ನೀಡುವಂತೆ ಒತ್ತಾಯಿಸಿದರೂ ಪ್ರಧಾನಿ ತುಟಿ ಬಿಚ್ಚುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿ ಕಲಾಪ ಮುಂದೂಡುತ್ತಲೇ ಬರುತ್ತದೆ.ಬೆಳಗ್ಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಇಂದೂ ಕೂಡ ಸದನದಲ್ಲಿ ಧರಣಿ ಮುಂದುರಿಸಿ ಪ್ರಧಾನಿ ಹೇಳಿಕೆ ನೀಡುವಂತೆ ಪಟ್ಟು ಮುಂದುವರಿಸಿದ ಹಿನ್ನೆಲೆಯಲ್ಲಿ ಉಂಟಾದ ಗಲಾಟೆ,ಗದ್ದಲದಿಂದ ಕಲಾಪವನ್ನು ಮುಂದೂಡುವಂತಾಯಿತು.
ಎರಡೂ ಸದನಗಳು ಭಿತ್ತಿಪತ್ರಗಳ ಪ್ರದರ್ಶನದೊಂದಿಗೆ ವಿರೋಧ ಪಕ್ಷದ ಸದಸ್ಯರು ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಸರಿದಾರಿಗೆ ತರಲು ಹರಸಾಹಸ ನಡೆಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ಕಲಾಪಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರು ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ವಿಪಕ್ಷಗಳ ವಿರುದ್ದ ವಾಗ್ದಾಳಿ
ವಿರೋಧ ಪಕ್ಷಗಳ ಸದಸ್ಯರಿಗೆ ಶಾಂತಿಯುತ ರೀತಿಯಲ್ಲಿ ಚರ್ಚೆಯಲ್ಲಿ ಭಾಗವಹಿಸುವುದು ಬೇಕಾಗಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಗದ್ದಲದ ನಡುವೆ ಹೇಳಿಕೆ ನೀಡಿದ ಅವರು ಚರ್ಚೆ ಮಾಡಲು ಸಿದ್ದರಿಲ್ಲದೆ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ನಮ್ಮ ಬಳಿ ಅಗತ್ಯ ಸಂಖ್ಯಾಬಲವಿದೆ ಹೀಗಾಗಿ ಅವಿಶ್ವಾಸಕ್ಕೆ ಹೆದರುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಅವಿಶ್ವಾಸ ಚರ್ಚೆಗೆ ಬಿಗಿಪಟ್ಟು
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಅಂಗೀಕರಿಸಿದ ಅವಿಶ್ವಾಸ ನಿರ್ಣಯದ ಮೇಲೆ ತಕ್ಷಣ ಚರ್ಚೆಗೆ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು .ತಡ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮಾತನಾಡಿ ೧೯೭೮ ರ ಉದಾಹರಣೆ ಉಲ್ಲೇಖಿಸಿ, ಅವಿಶ್ವಾಸ ನಿರ್ಣಯ ಅಂಗೀಕರಿಸಿದ ದಿನವೇ ಸದನ ಅದರ ಮೇಲೆ ಚರ್ಚೆಗೆ ಕೈಗೆತ್ತಿಕೊಂಡಿತು. ನೋಟೀಸ್ ನೀಡಿ ಮೂರು ದಿನ ಕಳೆದಿದೆ .ತಕ್ಷಣ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ,ಸಭಾಧ್ಯಕ್ಷರು ನಿರ್ಧರಿಸಿದ ದಿನ ಮತ್ತು ಸಮಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಮತ್ತು ನಿಯಮಗಳು ೧೦ ದಿನಗಳ ಗಡುವನ್ನು ನೀಡುತ್ತದೆ ಎಂದು ಹೇಳಿದ್ದಾರೆ.