ಮೋದಿ ಹುಟ್ಟುಹಬ್ಬ: 15 ದಿನ ಜನೋಪಯೋಗಿ ಕಾರ್ಯಕ್ರಮ

ಕೊರಟಗೆರೆ, ಸೆ. ೧೭- ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆ. ೧೭ ರಿಂದ ಅಕ್ಟೋಬರ್ ೨ ರವರೆಗೆ ೧೫ ದಿನಗಳ ಕಾಲ ನಾನಾ ರೀತಿಯ ಜನೋಪಯೋಗಿ ಕಾರ್ಯಗಳನ್ನು ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಸ್. ಪವನ್ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ, ಜೀವ ರಕ್ಷಕ ಅಭಿಯಾನ, ಉಚಿತ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ರೀತಿಯ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಡೆಸಲಾಗುವುದು ತಾಲೂಕು ಮಟ್ಟ ಹಾಗೂ ಬೂತ್ ಮಟ್ಟದಲ್ಲಿ ಈ ಕಾರ್ಯಗಳು ನಡೆಯಲಿವೆ ಎಂದರು.
ಪ್ರತಿ ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದಿಂದ ಅನುಕೂಲ ಪಡೆದಿರುವ ೫೦ ಫಲಾನುಭವಿಗಳಿಂದ ಪ್ರಧಾನಿ ಮೋದಿ ಅವರಿಗೆ ಕೃತಜ್ಞತಾ ಪತ್ರ ಬರೆಯುವ ಹಾಗೂ ಖಾದಿ ವಸ್ತು ಖರೀದಿಸುವ ಮತ್ತು ಧರಿಸುವ ಬಗ್ಗೆಯೂ ಯೋಜನೆ ಇದೆ. ಮೋದಿ@೨೦ ಹೆಸರಿನಲ್ಲಿ ಅವರ ಬದುಕು, ಜೀವನ ನಡೆದು ಬಂದ ದಾರಿ, ಅವರ ಆಡಳಿತ ಶೈಲಿ ಎಲ್ಲವನ್ನು ತೋರಿಸಲಾಗುವುದು. ಬಿಜೆಪಿಯ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು ಭಾಗವಹಿಸಿ ವಿನೂತನ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಮುಖಂಡ ತಿಮ್ಮಜ್ಜ ಮಾತನಾಡಿ ಪಕ್ಷದ ತೀರ್ಮಾನದಂತೆ ೧೫ ರೀತಿಯ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ಇದರೊಂದಿಗೆ ಪಂಡಿತ್ ದೀನ ದಯಾಳ್ ಹಾಗೂ ಮಹಾತ್ಮ ಗಾಂಧೀಜಿ ಅವರ ಜಯಂತಿಗಳನ್ನು ವಿಶೇಷವಾಗಿ ಆಚರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪಕ್ಷದ ನಾನಾ ಮೋರ್ಚಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದರು.
ಮುಖಂಡ ವಿಜಯ್ ಕುಮಾರ್ ಮಾತನಾಡಿ, ಎಸ್ಟಿ ಮೋರ್ಚಾ ವತಿಯಿಂದ ಸಚಿವ ಶ್ರೀರಾಮುಲು ಅವರು ಎಸ್ಸಿ ಎಸ್ಟಿ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ನಡೆಯಲಿದೆ ಹಾಗೂ ರೈತ ಮೋರ್ಚಾದಿಂದ ಕೆರೆಗಳ ನಿರ್ವಹಣೆಯನ್ನು ನೋಡಿಕೊಳ್ಳಲಾಗುವುದು ಮಹಿಳಾ ಮೋರ್ಚಾ ವತಿಯಿಂದ ಅಂಗನವಾಡಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸುರೇಶ್, ನಟರಾಜು, ಪ್ರಸನ್ನ ಕುಮಾರ್, ಬಾಲರಾಜು, ಮುಕ್ಕಣ್ಣಪ್ಪ, ರಂಗನಾಥ್, ಸ್ವಾಮಿ, ಗುರು, ನಂಜುಂಡ ಶೆಟ್ಟಿ, ಹೇಮಲತಾ, ಮಮತಾ, ಗಿರಿಜಮ್ಮ ಮತ್ತಿತರರು ಉಪಸ್ಥಿತರಿದ್ದರು.